ಬೆಂಗಳೂರು :ಹಠಮಾರಿ ಧೋರಣೆಯ ಮೂಲಕ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿರುವ ರಾಜ್ಯ ಸರ್ಕಾರ ಈಗ ಉತ್ತರ ಕರ್ನಾಟಕದಲ್ಲಿ ಓಟ್ ಬ್ಯಾಂಕ್ ರಾಜಕೀಯ ಭದ್ರಗೊಳಿಸಲು ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿದೆ. ರಾಜ್ಯ ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಶತಾಯಗಥಾಯ ಇದನ್ನು ವಿರೋಧಿಸಲಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದರು.
ರಾಜ್ಯ ಸರ್ಕಾರದಿಂದ ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿಲ್ಲ. ಬಿಜೆಪಿಯವರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಮಾ.6ರಂದು ಬಹಮನಿ ಸುಲ್ತಾನರ ಉತ್ಸವ ನಡೆಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಕಲಬುರಗಿ ಜಿಲ್ಲೆಯ ಅಧಿಕಾರಿಗಳಿಗೆ ಸ್ಪಷ್ಟ ಪಡಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲಬುರಗಿ ಮತ್ತು ವಿಜಯಪುರ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿ, ಓಟ್ ಬ್ಯಾಂಕ್ ರಾಜಕಾರಣ ಗಟ್ಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇಷ್ಟು ವರ್ಷವಾದರೂ ಯಾರಿಗೂ ಬಹಮನಿ ಸುಲ್ತಾನರ ಉತ್ಸವ ಮಾಡುವ ಕಲ್ಪನೆ ಬಂದಿರಲಿಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಶಾಂತಿ ಸೃಷ್ಟಿಸಲು ಈ ಉತ್ಸವವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಸಂಪೂರ್ಣವಾಗಿ ವಿರೋಧಿಸಲಿದೆ. ಉಗ್ರ ಹೋರಾಟ ನಡೆಸಿ ಉತ್ಸವ ನಿಲ್ಲಿಸಲಿದ್ದೇವೆ. ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಅವಕಾಶ ನೀಡುವುದಿಲ್ಲ ಎಂದರು.
ಚಿನ್ನಾಭರಣಗಳನ್ನು ರಸ್ತೆಬದಿಯಲ್ಲಿ ಸೇರುಗಳ ಮೂಲಕ ಮಾರಾಟ ಮಾಡುತ್ತಿದ್ದ ವಿಜಯನಗರ ಸಾಮ್ರಾಜ್ಯವನ್ನು ದ್ವಂಸ ಮಾಡಿದ ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿರುವುದು ರಾಜ್ಯದ ಜನತೆಗೆ ಮಾಡುವ ಅಪಮಾನ. ಮಾ.6ರಂದು ಕಲಬುರಗಿಯ ಕೋಟೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗುಮ್ಮಜ್‌ಗಳಲ್ಲಿ ಸಾಹಿತ್ಯ ಗೋಷ್ಠಿಯ ನಡೆಸಲು ಸರ್ಕಾರ ನಿರ್ಧರಿಸಿರುವ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.
ಕರ್ನಾಟಕದ ವೈಭವದ ಸಾಮ್ರಾಜ್ಯವಾದ ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯವನ್ನು ನಾಶಮಾಡಿದ ಬಹಮನಿ ಸುಲ್ತಾನರ ಉತ್ಸವ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಟಿಪ್ಪು ಜಯಂತಿ ಮತ್ತು ಬಹಮನಿ ಉತ್ಸವದ ಮೂಲಕ ಕರ್ನಾಟಕದಲ್ಲಿ ಅಶಾಂತಿ ಸೃಷ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.