ಕೊಯಂಬತ್ತೂರು: ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿದ ಘಟನೆ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವ ಘಟನೆ ಕೊಯಂಬತ್ತೂರ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಾನು ಹೊಡೆದ ಗುಂಡನ್ನು ವಿಫಲಗೊಳಿಸಲು ಷಡ್ಯಂತ್ರ ನಡೆಯುತ್ತಿದೆ: ಕುಮಾರಸ್ವಾಮಿ
ಈ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿರುವುದಾಗಿ ವರದಿ ವಿವರಿಸಿದೆ.
ನಮ್ಮ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಭಯೋತ್ಪಾದಕ ದಾಳಿಗಳು ಕೂಡಾ ಹೀಗೆ ನಡೆಯುತ್ತದೆ. ಇಂದು ಪಿಎಫ್ ಐನ ಹಲವು ಕಚೇರಿಗಳ ಮೇಲೆ ಎನ್ ಐಎ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದಾಳಿ ನಡೆಸಿರುವುದಾಗಿ ಬಿಜೆಪಿ ಕಾರ್ಯಕರ್ತ ನಂದಕುಮಾರ್ ಎಎನ್ ಐಗೆ ತಿಳಿಸಿರುವುದಾಗಿ ವರದಿಯಾಗಿದೆ.
ಗುರುವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿರುವ ವಂಶಾಡಳಿತದ ಪಕ್ಷವನ್ನು ಜನರು ತಿರಸ್ಕರಿಸಬೇಕು. ತಮಿಳುನಾಡಿನಲ್ಲಿ ಬಿಜೆಪಿಗೆ ಉಜ್ವಲ ಭವಿಷ್ಯವಿದ್ದು, ವೇಲು ನಾಚಿಯಾರ್ ಮತ್ತು ಪುಲಿ ತೇವರ್ ರಂತಹ ಮಹಾನ್ ಯೋಧರ ಈ ಪವಿತ್ರ ಭೂಮಿಯಲ್ಲಿ ಕಮಲ ಅರಳಲಿದೆ ಎಂದು ನಡ್ಡಾ ಸಮಾವೇಶದಲ್ಲಿ ಮಾತನಾಡುತ್ತ ತಿಳಿಸಿದ್ದರು.