ಹಾಸನ: ಜಿಲ್ಲೆಯ ರಾಜಕಾರಣದಲ್ಲಿ ಎಚ್.ಡಿ. ರೇವಣ್ಣ ಅವರಿಗಿರುವ ಶಕ್ತಿಯನ್ನು ನಾನು ಅಲ್ಲಗಳೆಯಲಾರೆ. ಜಿಲ್ಲೆಯಲ್ಲಿ ಜೆಡಿಎಸ್ ಎಂದರೆ ರೇವಣ್ಣ, ರೇವಣ್ಣ ಎಂದರೆ ಜೆಡಿಎಸ್ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ಅವರು ರೇವಣ್ಣ ಅವರ ಗುಣಗಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರೇವಣ್ಣ ಅವರು ಹಾಸನ ಜಿಲ್ಲೆಯ ರಾಜಕಾರಣವನ್ನು 50 ವರ್ಷಗಳಿಂದ ಬಲ್ಲವರು. ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸೋತರೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡರು. ರಾಜ್ಯದಲ್ಲಿ ಜೆಡಿಎಸ್ ಗೆದ್ದ ಒಂದು ಸ್ಥಾನ ಹಾಸನ ಕ್ಷೇತ್ರ. ಎಂಎಲ್ಸಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸೋತರೂ ಹಾಸನ ಜಿಲ್ಲೆಯಲ್ಲಿ ಡಾ| ಸೂರಜ್ ರೇವಣ್ಣ ಅವರನ್ನು ಗೆಲ್ಲಿಸಿಕೊಂಡವರು ರೇವಣ್ಣ. ರೇವಣ್ಣ ಅವರಿಗಿರುವ ರಾಜಕೀಯ ಶಕ್ತಿಯನ್ನು ಟೀಕೆ ಮಾಡುವವರಿಗೆ ಹಾಸನ ಜಿಲ್ಲೆಯ ರಾಜಕೀಯ ಗೊತ್ತಿಲ್ಲ ಎಂದೇ ಅರ್ಥ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರೀತಂ ಗೌಡ ಹೇಳಿದರು.
ನನಗೆ ಹಾಸನ ಕ್ಷೇತ್ರದಲ್ಲಿ ಶಕ್ತಿ ಇದೆ. ಆದರೆ ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರಿಗಿರುವ ರಾಜಕೀಯ ಶಕ್ತಿಯನ್ನು ಒಪ್ಪಿಕೊಳ್ಳುತ್ತೇನೆ. ಗುಣಕ್ಕೆ ಮತ್ಸರ ಪಡಬಾರದು. ರೇವಣ್ಣ ಅವರ ಶಕ್ತಿಯನ್ನು ಪ್ರಶ್ನಿಸುವುದು ಒಳ್ಳೆಯದಲ್ಲ. ಅವರಿಗೆ ಗೌರವ ಕೊಡಲೇಬೇಕು. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರ ಆಶೀರ್ವಾದ ಇಲ್ಲದ ಜೆಡಿಎಸ್ ಅಭ್ಯರ್ಥಿ ಠೇವಣಿಯನ್ನೂ ಪಡೆಯಲಾರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದು ರೇವಣ್ಣ ಅವರನ್ನು ಹೊಗಳಿ ಅವರ ಎದುರಾಳಿ ಎಚ್.ಪಿ. ಸ್ವರೂಪ್ ಅವರನ್ನು ಕಂಗೆಡಿಸುವ ತಂತ್ರವೂ ಆಗಿರಬಹುದು ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ರೇವಣ್ಣ ಕುಟುಂಬದವರು ಹಾಸನ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಫರ್ಧೆಗಿಳಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುವೆ. 50 ಸಾವಿರದಲ್ಲಿ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡುವೆ ಎಂಬ ಪಂಥಾಹ್ವಾನಕ್ಕೆ ನಾನು ಈಗಲೂ ಬದ್ಧನಾಗಿರುವೆ.
-ಪ್ರೀತಂ ಗೌಡ, ಶಾಸಕ