ಹೈದರಾಬಾದ್/ಹೊಸದಿಲ್ಲಿ: ಆಡಳಿತಾರೂಢ ಟಿಆರ್‌ಎಸ್, ಬಿಜೆಪಿ ಹಾಗೂ ಎಐಎಂಐಎಂಗೆ ಪ್ರತಿಷ್ಠೆಯ ಕಣವಾಗಿದ್ದ ಹೈದರಾಬಾದ್ ನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, 150 ಸೀಟುಗಳ ಪೈಕಿ 56ರಲ್ಲಿ ಗೆಲುವು ಸಾಧಿಸುವ ಮೂಲಕ ಟಿಆರ್‌ಎಸ್ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಅದೇ ರೀತಿ ಬಿಜೆಪಿಯು ಬಹುಮತ ಪಡೆಯುವಲ್ಲಿ ವಿಫಲವಾದರೂ, ಪಕ್ಷದ ಹೈಪ್ರೊಫೆಲ್ ಪ್ರಚಾರವು ಬಹುತೇಕ ಫಲಪ್ರದವಾಗಿದ್ದು, ಬರೋಬ್ಬರಿ 49 ಸ್ಥಾನಗಳನ್ನು ಗಳಿಸುವ ಮೂಲಕ ಅಚ್ಚರಿಯ ಸಾಧನೆಗೈದಿದೆ. ಇನ್ನು ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು 43 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ, ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ಸಾಂಪ್ರದಾಯಿಕ ಮತಗಳ ಮೇಲೆ ಪಕ್ಷದ ಪ್ರಭಾವ ತಗ್ಗಿಲ್ಲ ಎಂಬುದನ್ನು ಸಾಬೀತುಪ ಡಿಸಿದೆ. ಇನ್ನು ಕೇವಲ 2 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬಿಜೆಪಿ ಭರ್ಜರಿ ಸಾಧನೆ: 2016ರ ಚುನಾವಣೆಯಲ್ಲಿ ಕೇವಲ 4 ಸ್ಥಾನಗಳನ್ನು ಪಡೆದಿದ್ದು ಬಿಜೆಪಿ, ದಕ್ಷಿಣದ ರಾಜ್ಯಗಳಲ್ಲಿ ಬೇರೂರುವ ಕಾರ್ಯತಂತ್ರದ ಭಾಗವಾಗಿ ಹೈದರಾಬಾದ್‌ನಲ್ಲಿ ಹೈವೋಲ್ಟೆàಜ್ ಪ್ರಚಾರ ನಡೆಸಿತ್ತು. ರಾಷ್ಟ್ರ ನಾಯಕರಾದ ನಡ್ಡಾ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಕೂಡ ಇಲ್ಲಿ ರೋಡ್‌ಶೋ ನಡೆಸಿದ್ದರು. ಆದರೆ ಜಿಎಚ್‌ಎಂಸಿ ಆಡಳಿತ ಕೈಗೆತ್ತಿಕೊಳ್ಳುವಲ್ಲಿ ಪಕ್ಷ ವಿಫಲವಾಯಿತು. ಆದರೂ, 49 ಸ್ಥಾನಗ ಳನ್ನು ಗೆದ್ದಿರುವುದು ಪಕ್ಷದ ಅತ್ಯುತ್ತಮ ಸಾಧನೆ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. 2016ರ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್‌ಎಸ್ 150ರ ಪೈಕಿ 99 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿತ್ತು. ಈ ಬಾರಿಯ ಇಂಥ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ಆದರೂ ನಾವು ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಸಮಾ ಧಾ ನ ತಂದಿದೆ ಎಂದು ಸಿಎಂ ಕೆ.ಚಂದ್ರ ಶೇಖರ್ ರಾವ್ ಹೇಳಿದ್ದಾರೆ. ಫಲಿತಾಂಶವು ಬಿಜೆಪಿಗೆ ಸಿಕ್ಕಿದ ನೈತಿಕ ಜಯವಾಗಿದ್ದು, ರಾಜ್ಯದಲ್ಲಿ ಟಿಆರ್‌ಎಸ್‌ಗೆ ಬಿಜೆಪಿಯೊಂದೇ ಪರ್ಯಾಯ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ: ಮಹಾರಾಷ್ಟ್ರದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. 5 ಸೀಟುಗಳ ಪೈಕಿ 4ರಲ್ಲಿ ಆಡಳಿತಾರೂಢ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿ ಜಯ ಸಾಧಿಸಿದರೆ, ಒಂದು ಕಡೆ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ವಿಶೇಷವೆಂದರೆ, ಬಿಜೆಪಿ ಭದ್ರಕೋಟೆ ನಾಗ್ಪುರದಲ್ಲೇ ಪಕ್ಷದ ಅಭ್ಯರ್ಥಿ ಸೋಲುಂಡಿದ್ದಾರೆ. ಉತ್ತರಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 3ರಲ್ಲಿ, ಎಸ್‌ಪಿ 1ರಲ್ಲಿ ಜಯ ಸಾಧಿಸಿದೆ.