ಕೊಪ್ಪಳ : ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರೆಡ್ಡಿ ಅವರ ನಡೆ ಕುತೂಹಲ ಮೂಡಿಸಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆಗೆ ಕೆಆರ್ ಪಿಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ರೆಡ್ಡಿ ಅವರು ದಿಢೀರ್ ಶಾ ಮತ್ತು ಬಿಜೆಪಿ ಪ್ರಮುಖ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ‘ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಶಾ ಜಿಯವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು ನನಗೆ ಬಹಳ ಸಂತೋಷವನ್ನು ತಂದಿದೆ’ ಎಂದು ಎಕ್ಸ್ ನಲ್ಲಿ ರೆಡ್ಡಿ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ನಡೆದ ರಾಜ್ಯಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ಇತಿಹಾಸ ಪ್ರಸಿದ್ಧ ಆನೆಗೊಂದಿ ಉತ್ಸವದಲ್ಲಿ ಪಾಲ್ಗೊಂಡು ಮರುದಿನವೇ ಬಿಜೆಪಿ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದಾರೆ.
ಕಳೆದ ವಾರ ಬಿ.ಶ್ರೀರಾಮುಲು ಅವರ ಟಿಕೆಟ್ ತಪ್ಪಿಸಲು ಗಾಲಿ ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.ಇದನ್ನು ತಮ್ಮ ಮೇಲೆ ಆರೋಪ ಹಾಕುವ ದೃಷ್ಟಿಯಿಂದಲೇ ಸೃಷ್ಟಿಸಲಾಗಿದೆ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕಿಷ್ಕಿಂಧಾ ಅಂಜನಾದ್ರಿ ಮತ್ತು ರಾಜ್ಯದ ಪ್ರಗತಿಯ ಯೋಜನೆಗಳ ಚರ್ಚೆ ಅನುದಾನ ಪಡೆಯಲು ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ. ವಿಶೇಷವಾಗಿ ಲೋಕಸಭಾ ಚುನಾವಣೆಯ ಸ್ಥಾನಗಳ ಹೊಂದಾಣಿಕೆ ಅಥವಾ ಪಕ್ಷವನ್ನು ಬೆಂಬಲಿಸುವ ಕುರಿತು ಯಾವುದೇ ರೀತಿಯ ಮಾತುಕತೆಗಳು ನಡೆದಿಲ್ಲ. ಕೇಂದ್ರ ಗೃಹ ಸಚಿವರ ಭೇಟಿ ಕೇವಲ ಅಭಿವೃದ್ದಿ ಕಾರ್ಯಗಳಿಗೆ ಸೀಮಿತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೊಪ್ಪಳ ಬಳ್ಳಾರಿ ಸೇರಿ ಹಲವೆಡೆ ರೆಡ್ಡಿ ಅವರು ತನ್ನದೇ ಆದ ಮತಬ್ಯಾಂಕ್ ಮತ್ತು ಬೆಂಬಲಿಗರನ್ನು ಹೊಂದಿದ್ದು ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು, ಕೊಪ್ಪಳ, ರಾಯಚೂರು ಭಾಗದಲ್ಲಿ ಬಿಜೆಪಿಗೆ ನೆರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.