Advertisement

BJP-JDS ಸದನದ ಬಳಿಕ ಪಾದಯಾತ್ರೆ ಕದನ! ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ಬಿಜೆಪಿ-ಜೆಡಿಎಸ್‌ ಪಣ

01:02 AM Jul 26, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ಮೇಲೆ ಮುಗಿಬಿದ್ದಿರುವ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿವೆ.

Advertisement

ಈ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಭಟನೆ, ಅಹೋರಾತ್ರಿ ಧರಣಿ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದ ವಿಪಕ್ಷಗಳು ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿವೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ.

ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ- ಜೆಡಿಎಸ್‌ ಜಂಟಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಈ ಸಂಬಂಧ ಉಭಯ ಪಕ್ಷಗಳ ಶಾಸಕರು ಗುರುವಾರ ಸಭೆ ನಡೆಸಿದ್ದಾರೆ. ಜು. 31 ಅಥವಾ ಆ. 1ರಿಂದ ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿನ ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಅಂತಿಮವಾಗಿ ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರಕಾರದ ವಿರುದ್ಧ ಜನಾಂದೋಲನ ನಡೆಸಲು ನಿರ್ಣಯಿಸಲಾಗಿದೆ.

ಜು. 28ರಂದು ಮತ್ತೊಂದು ಸಭೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಸುರೇಶ್‌ ಬಾಬು ಉಪಸ್ಥಿತಿಯಲ್ಲಿ ಎರಡು ಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ಜು. 28ರಂದು ಕೇಂದ್ರ ಸಚಿವ ಎಚ್‌ಡಿಕೆ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಎನ್‌ಡಿಎ ನಾಯಕರ ಜತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಪಾದಯಾತ್ರೆಯ ದಿನಾಂಕ ಹಾಗೂ ಸ್ವರೂಪವನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಸಂಸತ್‌ ಕಲಾಪ ನಡೆಯುತ್ತಿರುವ ಕಾರಣಕ್ಕೆ ಸಂಸದರು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಮಂಡ್ಯ ಹಾಗೂ ಮೈಸೂರಿನಲ್ಲಿ ಕುಮಾರಸ್ವಾಮಿ ಭಾಗವಹಿಸುವ ಸಾಧ್ಯತೆ ಅಧಿಕವಾಗಿದೆ. ಈ ಯಾತ್ರೆಯ ಮೂಲಕ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ದಾಖಲಿಸುವ ಜತೆಗೆ ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಪಕ್ಷಗಳ ಪರ ಸಂಚಲನ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.

Advertisement

ರಾಷ್ಟ್ರಪತಿಗೆ ದೂರು?
ಇದೆಲ್ಲದರ ಜತೆಗೆ ಬಿಜೆಪಿ-ಜೆಡಿಎಸ್‌ ನಿಯೋಗ ದಿಲ್ಲಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರದ ಬಗ್ಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ದೂರು ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಹಗರಣಗಳ ಸರಮಾಲೆಯ ಬಗ್ಗೆ ದಿಲ್ಲಿ ಮಟ್ಟದಲ್ಲೂ ಪ್ರಸ್ತಾವಿಸಿ ಎಐಸಿಸಿ ನಾಯಕರನ್ನೂ ಮುಜುಗರಕ್ಕೆ ಒಳಪಡಿಸಬೇಕು ಆಗ್ರಹಿಸ ಬೇಕೆಂಬ ಸಲಹೆ ವ್ಯಕ್ತವಾಗಿದೆ.

ಪಾದಯಾತ್ರೆಯ ರೂಪುರೇಷೆ
-ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿಗೆ ಪಾದಯಾತ್ರೆ
-ಜು. 28ರಂದು ಪಾದಯಾತ್ರೆಗೆ ಅಂತಿಮ ರೂಪ ಸಾಧ್ಯತೆ
-ಜು. 31 ಅಥವಾ ಆ. 1ರಿಂದ ಯಾತ್ರೆ ಆರಂಭ ನಿರೀಕ್ಷೆ
-ಪ್ರತೀ ದಿನ 20 ಕಿ.ಮೀ. ಸರ್ವೀಸ್‌ ರಸ್ತೆಯಲ್ಲಿ ಕಾಲ್ನಡಿಗೆ
-ಪ್ರತೀ ತಾಲೂಕು ಕೇಂದ್ರಗಳಲ್ಲಿ ಸಣ್ಣ ಸಣ್ಣ ಸಮಾವೇಶ
-6ರಿಂದ 7 ದಿನಗಳ ಯಾತ್ರೆ, ಅನಂತರ ಸಮಾರೋಪ
-ಅಂತಿಮ ದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾಗೆ ಆಹ್ವಾನ

ಪ್ರತಿ ಪಾದಯಾತ್ರೆಯಿಂದಲೇ ಕಾಂಗ್ರೆಸ್‌ ತಿರುಗೇಟು?
ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಘೋಷಿಸಿರುವ ಬಿಜೆಪಿ-ಜೆಡಿಎಸ್‌ಗೆ ತಿರುಗೇಟು ನೀಡಲು ಕಾಂಗ್ರೆಸ್‌ನಿಂದಲೂ ಪ್ರತಿತಂತ್ರಗಳು ಆರಂಭವಾಗಿವೆ. ಇದಕ್ಕೆ ಪ್ರತಿಯಾಗಿ ಸಮಾವೇಶ ಮಾಡಬೇಕೇ? ಪಾದಯಾತ್ರೆ ಮಾಡಬೇಕೇ ಎಂಬ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ನಿರ್ಧಾರಕ್ಕೆ ಬರಲಿದೆ.

ವಿಪಕ್ಷಗಳ ಪಾದಯಾತ್ರೆ ಸರಕಾರ ಹಾಗೂ ಕಾಂಗ್ರೆಸ್‌ ಪಕ್ಷದ ವರ್ಚಸ್ಸಿಗೆ, ಅದರಲ್ಲೂ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂಬ ಆತಂಕ ಉಂಟಾಗಿದೆ. ಹೀಗಾಗಿ ನಮ್ಮಿಂದಲೂ ಪಾದಯಾತ್ರೆ ಇಲ್ಲವೇ ಬೃಹತ್‌ ಸಮಾವೇಶ ನಡೆಸಿ ಬಿಜೆಪಿ-ಜೆಡಿಎಸ್‌ ಕಾಲದ ಹಗರಣಗಳನ್ನು ಬಯಲು ಮಾಡಬೇಕೆಂಬ ಚಿಂತನೆ ಸಿಎಂ ಆಪ್ತ ವಲಯದಲ್ಲಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next