ಮೈಸೂರು: ಮುಡಾ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಪ್ರಕರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಹಣದ ಅಮಿಷ ಒಡ್ಡಿರುವ ಅಂಶ ಬೆಳಕಿಗೆ ಬಂದಿದೆ.
ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯದಲ್ಲಿ ನಾನು ಸಲ್ಲಿಸಿರುವ ಅರ್ಜಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡು ಕೆಲವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣದ ಆಮಿಷ ಒಡ್ಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬುಧವಾರ ಲೋಕಾಯುಕ್ತ ಎಸ್.ಪಿ. ಕಚೇರಿಗೆ ದೂರು ಸಲ್ಲಿಸಿದರು.
ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡ ಕೆಲವರು ಡಿ. 12ರಂದು ನನ್ನ ಮನೆಗೆ ಬಂದಿದ್ದರು. ಪಾರ್ವತಿ ಅವರ ಆಗು ಹೋಗುಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಅವರು ಈ ಪ್ರಕರಣದಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಕೋರಿರುವ ಪ್ರಕರಣವನ್ನು ಹಿಂಪಡೆಯಿರಿ. ಬೇಕಿದ್ದರೆ ಲೋಕಾಯುಕ್ತ ತನಿಖೆ ಮುಂದುವರಿಯಲಿ ಎಂದು ಕೋರಿದ್ದರು. ಇದಕ್ಕೆ ನಾನು ಒಪ್ಪಿರಲಿಲ್ಲ ಎಂದು ವಿವರಿಸಿದರು.
ಸಿ.ಟಿ.ಕುಮಾರ್ ಹೇಳಿದ ಕಡೆ ಪಾರ್ವತಿ ಅವರು ಸಹಿ ಮಾಡಿದ್ದಾರೆ ಅಷ್ಟೆ, ಇದರಲ್ಲಿ ಅವರ ತಪ್ಪಿಲ್ಲ. ಈ ಪ್ರಕರಣದಲ್ಲಿ ಅವರ ತಪ್ಪಿಲ್ಲ. ಪಾರ್ವತಿ ಅವರು ತುಂಬಾ ನೊಂದಿದ್ದಾರೆ. ಸರಿಯಾಗಿ ಊಟ ನಿದ್ರೆ ಮಾಡುತ್ತಿಲ್ಲ. ದಯಮಾಡಿ ಸಹಕಾರ ನೀಡಿ. ನಿಮಗೆ ಎಷ್ಟು ಕೋಟಿ ಬೇಕಾದರೂ ಕೊಡುತ್ತೇವೆ ಎಂದರು ಎಂದು ಆರೋಪಿಸಿದರು.
ಈ ಘಟನೆಯಾದ ಮಾರನೇ ದಿನವೇ ಕೆ.ಆರ್.ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಯಿತು. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಕೀಲರನ್ನು ಕಾಣಲು ಬೆಂಗಳೂರಿಗೆ ತೆರಳಿದೆ. ಡಿ. 15ರಂದು ಮತ್ತೆ ನನ್ನ ಮನೆಗೆ ಬಂದ ಶ್ರೀನಿಧಿ ಮತ್ತು ಹರ್ಷ ಎಂಬ ಇಬ್ಬರು ನನ್ನ ಮಗನ ಜತೆ ಮಾತನಾಡಿದ್ದಾರೆ. ಪ್ರಕರಣ ಹಿಂಪಡೆಯಲು ಇದೇ ರೀತಿ ವ್ಯಕ್ತಿಯೊಬ್ಬರಿಗೆ ಮೂರು ಕೋಟಿ ರೂ. ಕೊಟ್ಟಿದ್ದೇವೆ ಎಂದು ಹಣದ ಬ್ಯಾಗ್ ಇರುವ ವೀಡಿಯೋ ತೋರಿಸಿದ್ದಾರೆ. ನಿಮ್ಮ ತಂದೆ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯಲು ಒಪ್ಪಿದರೆ ಇದೇ ರೀತಿ ಹಣ ಕೊಡುವುದಾಗಿಯೂ ಆಮಿಷ ಒಡ್ಡಿದ್ದಾರೆ. ನನ್ನ ಮಗ ಒಪ್ಪದಿದ್ದಾಗ ಅವನಿಂದ ನನ್ನ ಮೊಬೈಲ್ ಸಂಖ್ಯೆ ಪಡೆದು ಹಲವು ಬಾರಿ ಕರೆ ಮಾಡಿದ್ದಾರೆ ಎಂದು ಹೇಳಿದರು.
ಈ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಇಡಿ ಕಚೇರಿಗೆ ದೂರು ನೀಡಿದ್ದೇನೆ. ಈಗ ಲೋಕಾಯುಕ್ತ ಎಸ್.ಪಿ. ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತಿದ್ದೇನೆ. ಆರೋಪಿಗಳು ನನ್ನ ಮನೆಗೆ ಬಂದು ನನ್ನ ಮಗನ ಜತೆ ಮಾತನಾಡುತ್ತಿರುವ ದೃಶ್ಯಗಳು ಮನೆಯ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದ್ದು, ಅವುಗಳನ್ನು ಸಾಕ್ಷವನ್ನಾಗಿ ನೀಡಿದ್ದೇನೆ ಎಂದರು.
ಆಯೋಗದಿಂದ ನ್ಯಾ| ದೇಸಾಯಿ ಕೈಬಿಡಲು ಸಿಎಸ್‌ಗೆ ದೂರು
ಮುಡಾ ಹಗರಣ ಸಂಬಂಧ ರಾಜ್ಯ ಸರ್ಕಾರ ನೇಮಿಸಿರುವ ಏಕಸದಸ್ಯ ಆಯೋಗದ ಮುಖ್ಯಸ್ಥರಾದ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ವಿಚಾರಣಾ ಆಯೋಗದಿಂದ ಕೈ ಬಿಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.