ಚಿಕ್ಕೋಡಿ: ದೇಶದಲ್ಲಿ ಸಂವಿಧಾನ ಬದ್ಧ ಹಕ್ಕುಗಳು ಅನುಷ್ಠಾನಗೊಂಡಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ ಮಾತ್ರ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ಹೇಳಿದರು.
ಅವರು ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಾಂಗ್ರೆಸ್ ದುರಾಡಳಿತ ತೊಲಗಿಸಿ ಹಾಗೂ ದೇಶದಲ್ಲಿ ಜನಪರ ಆಡಳಿತ ನೀಡುವ ಉದ್ದೇಶದಿಂದ ಪ್ರಾರಂಭಗೊಂಡ ಬಿಜೆಪಿ ಇಂದು 18 ಕೋಟಿ ಸದಸ್ಯತ್ವ ಹೊಂದಿದ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದ ಅವರು, ಕಳೆದ ಎರಡು ಅವಧಿಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
1951 ರಲ್ಲಿ ಪಂ.ದೀನದಯಾಳ ಉಪಾಧ್ಯಾಯ ಹಾಗೂ ಡಾ.ಶ್ಯಾಮಪ್ರಸಾದ ಮುಖರ್ಜಿಯವರಿಂದ ಪ್ರಾರಂಭಗೊಂಡ ಭಾರತೀಯ ಜನಸಂಘ ಮುಂದೆ 1980 ರಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಅಸ್ತಿತ್ವಕ್ಕೆ ಬಂತು. ಅಂದು ಕೆಲವೇ ಕೆಲವು ಸ್ವಯಂಸೇವಕರಿಂದ ಪ್ರಾರಂಭಗೊಂಡ ಬಿಜೆಪಿ ಇಂದು ಇಡೀ ದೇಶದಲ್ಲಿ ಅತೀ ಹೆಚ್ಚು ಸಂಸದರನ್ನು, ಶಾಸಕರನ್ನು, ದಲಿತ, ಮಹಿಳಾ ಸಂಸದ ಹಾಗೂ ಶಾಸಕರನ್ನು ಹೊಂದಿರುವ ಏಕೈಕ ಪಕ್ಷವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ-ಸದಲಗಾ ಮಂಡಲ ಅಧ್ಯಕ್ಷ ಸಂಜಯ ಪಾಟೀಲ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಚಾಲಕ ಪ್ರಸಾದ ಪಚಂಡಿ, ಧುರೀಣರಾದ ಅಪ್ಪಾಸಾಹೇಬ ಚೌಗಲಾ, ಶಕುಂತಲಾ ಡೊಣವಾಡೆ, ಗೀತಾ ಪಾಟೀಲ, ರಾಜು ಹರಗನ್ನವರ, ಶೇಖರಗೌಡಾ ಮೊದಗಿ, ಸುವರ್ಣಾ ಹಂಪಣ್ಣವರ,ಬಾಬಾಸಾಹೇಬ ಕೆಂಚನವರ, ಸುಮಾ ಗವಿ, ರಾಜಶ್ರೀ ಪಾಟೀಲ, ಶಿವಾನಂದ ನವಿನಾಳೆ, ಡಾ.ರವಿ ಸಂಕ, ಸಂತೋಷ ಠವಳೆ, ವಿನಾಯಕ ತಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.