ಹೊಸದಿಲ್ಲಿ: ದೇಶದ 7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿಯೇ ಅತಿ ಶ್ರೀಮಂತ ಪಕ್ಷವಾಗಿದ್ದು, ಕಾಂಗ್ರೆಸ್ 2ನೇ ಸ್ಥಾನದಲ್ಲಿದೆ. ಹೀಗೆಂದು ಎಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ì (ಎಡಿಆರ್) ವರದಿ ಹೇಳಿದೆ. ರಾಜಕೀಯ ನೇತಾರರ, ಪಕ್ಷಗಳ ಆಸ್ತಿ ಮತ್ತು ಸಂಪತ್ತು ವೃದ್ಧಿ ಮೇಲೆ ನಿಯಂತ್ರಣ ಹೇರಬೇಕೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ.
ರಾಷ್ಟ್ರೀಯ ಪಕ್ಷಗಳು 2004-05ನೇ ಸಾಲಿನಿಂದ 2015-16ರ ವರೆಗೆ ವೃದ್ಧಿಸಿಕೊಂಡ ಆಸ್ತಿ ಮತ್ತು ಸಂಪತ್ತಿನ ವಿವರಗಳನ್ನು ಇದರಲ್ಲಿ ನೀಡಲಾಗಿದೆ. 11 ವರ್ಷಗಳ ಅವಧಿಯಲ್ಲಿ ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 894 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದೆ (2015-16ನೇ ಸಾಲಿನ ಮಾಹಿತಿ). ಇನ್ನು ವಿಪಕ್ಷ ಕಾಂಗ್ರೆಸ್ 759 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಬಿಎಸ್‌ಪಿ ಮೂರನೇ ಸ್ಥಾನದಲ್ಲಿದ್ದರೆ, ಸಿಪಿಎಂ 4ನೇ ಸ್ಥಾನದಲ್ಲಿದೆ. ಇನ್ನು ಹಣಕಾಸು ಬಾಧ್ಯತೆ ಮೊತ್ತವನ್ನು ಬಿಜೆಪಿ 25 ಕೋಟಿ ರೂ. ಎಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್ 329 ಕೋಟಿ ರೂ. ಎಂದು ಹೇಳಿದೆ.
ರಾಜಕೀಯ ಪಕ್ಷಗಳು 2004-2005ನೇ ಸಾಲಿನ ಹಣಕಾಸು ವರ್ಷದಿಂದ 2015-16ನೇ ಸಾಲಿನ ವರೆಗೆ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಆಧಾರದಲ್ಲಿ ಈ ವರದಿ ಸಿದ್ಧಪಡಿಸ ಲಾಗಿದೆ ಎಂದು ಎಡಿಆರ್ ಹೇಳಿಕೊಂಡಿದೆ. ಸ್ಥಿರ, ಚರ ಆಸ್ತಿ, ನಗದು, ಠೇವಣಿ, ಸಾಲ, ಮುಂಗಡ ಪಡೆದುಕೊಂಡದ್ದು, ಭದ್ರತೆರಹಿತ ಸಾಲ, ಓವರ್‌ಡ್ರಾಫ್ಟ್ ವ್ಯವಸ್ಥೆ ಆಸ್ತಿ ವಿವರದಲ್ಲಿ ಸೇರಿದೆ.
ಬಿಜೆಪಿ ನೇತೃತ್ವದ ಮೈತ್ರಿಕೂಟ 2014-15ನೇ ಸಾಲಿನಲ್ಲಿ ಅಧಿಕಾರಕ್ಕೇರುವ ಮುನ್ನ, ಕಾಂಗ್ರೆಸ್ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿತ್ತು. ನಂತರದ ವರ್ಷದಲ್ಲಿ ಕಾಂಗ್ರೆಸ್ ಅನ್ನು ಬಿಜೆಪಿ ಹಿಂದೆ ಹಾಕಿತ್ತು. 2015-16ರಲ್ಲಿ ಪಕ್ಷಗಳು ಹೊಂದಿರುವ ಒಟ್ಟು ಆಸ್ತಿಯ ಮೌಲ್ಯ ಮತ್ತು ಹೊಣೆಗಾರಿಕೆಯ ಮೊತ್ತ ಕಳೆದಾಗ ಬರುವ ಮೊತ್ತದಲ್ಲಿ ಬಿಜೆಪಿಗೆ ಮೊದಲ ಸ್ಥಾನವಿದ್ದು 969 ಕೋಟಿ ರೂ. ಮೊತ್ತವನ್ನು ಘೋಷಿಸಿಕೊಂಡಿದೆ.
ಮೀಸಲು ನಿಧಿ ಸಂಗ್ರಹಣೆಯಲ್ಲಿಯೂ ಬಿಜೆಪಿ ಶೇ.700ರಷ್ಟು ಹೆಚ್ಚಳ ಮಾಡಿಕೊಂಡಿದೆ. 11 ವರ್ಷಗಳಲ್ಲಿ ಕಾಂಗ್ರೆಸ್ ಸಂಗ್ರಹಿಸಿದ್ದು ಕೇವಲ ಶೇ. 169ರಷ್ಟು ಮಾತ್ರ. ಈ ಪೈಕಿ ಟಿಎಂಸಿ ಮತ್ತು ಬಿಎಸ್‌ಪಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಕ್ರಮವಾಗಿ ಶೇ.13, 447 ಮತ್ತು ಶೇ.1,194ರಷ್ಟು ದಾಖಲಾಗಿದೆ.