Advertisement

ವರಿಷ್ಠರ ನೇತೃತ್ವದಲ್ಲಿ ಚುನಾವಣೆ 

12:30 AM Jan 08, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಯ ಲೆಕ್ಕಾಚಾರದಲ್ಲಿ ತಂತ್ರ, ಪ್ರತಿತಂತ್ರ ಹೆಣೆಯುವುದರಲ್ಲೇ ಬಿಜೆಪಿಯ ಹಲವು ಹಿರಿಯ ನಾಯಕರು ನಿರತರಾಗಿರುವುದರಿಂದ ಲೋಕಸಭಾ ಚುನಾವಣೆ ಸಿದ್ಧತೆ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ ಎಂಬುದಾಗಿ ಪಕ್ಷದ ವಲಯದಲ್ಲೇ ಅಪಸ್ವರ ಕೇಳಿಬಂದಿದೆ.

Advertisement

ಸರ್ಕಾರ ರಚನೆಗೆ ಪೂರಕ ವಾತಾವರಣದ ನಿರೀಕ್ಷೆ ಹಾಗೂ ಸಚಿವ ಸ್ಥಾನ ಸೇರಿದಂತೆ ಇತರೆ ಸ್ಥಾನಮಾನ ವಂಚಿತ ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲೇ ಸಮಯ ಕಳೆಯುತ್ತಿರುವ ಬಗ್ಗೆ ನಾಯಕರಲ್ಲೇ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯ ಬಿಜೆಪಿ ನಾಯಕರ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಇಡೀ ಲೋಕಸಭಾ ಚುನಾವಣೆಯನ್ನು ತನ್ನ ಮೇಲ್ವಿಚಾರಣೆಯಲ್ಲೇ ನಡೆಸಲು ಚಿಂತಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ಪುನಾರಚನೆ ಹಾಗೂ ನಿಗಮ ಮಂಡಳಿ ನೇಮಕದ ನಂತರದ ಪರಿಸ್ಥಿತಿಯಲ್ಲಿ ಬಿಜೆಪಿ ಆಸೆ ಚಿಗುರೊಡೆದಿತ್ತು. ಆದರೆ ನಂತರ ಬಿಜೆಪಿಯ ನಿರೀಕ್ಷೆಯಂತೆ ಬೆಳವಣಿಗೆಗಳಾದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಪೂರಕ ವಾತಾವರಣ ನಿರ್ಮಾಣವಾಗಿಲ್ಲ. ಇಷ್ಟಾದರೂ ಮಕರ ಸಂಕ್ರಮಣದ ಬಳಿಕ ಭಾರೀ ರಾಜಕೀಯ ಬದಲಾವಣೆ ಲೆಕ್ಕಾಚಾರದಲ್ಲೇ ರಾಜ್ಯ ಬಿಜೆಪಿ ನಾಯಕರು ಮುಳುಗಿದ್ದಾರೆ.

ಸಿದ್ಧತೆಗೆ ಹಿನ್ನಡೆ: ರಾಜ್ಯದ ಲೋಕಸಭಾ ಕ್ಷೇತ್ರವಾರು ಚುನಾವಣಾ ಪ್ರಭಾರಿಗಳು ಹಾಗೂ ಸಂಚಾಲಕರ ನೇಮಕವಾದರೂ ಈವರೆಗೆ ಹಲವರು ಸಭೆ ನಡೆಸಿ ಸಿದ್ಧತೆ ಕಾರ್ಯಕ್ಕೆ ಮುಂದಾಗಿಲ್ಲ. ಕೆಲ ನಾಯಕರು ಕ್ಷೇತ್ರ ಪ್ರಭಾರಿ ಬದಲಾವಣೆಗೆ ಮನವಿ ಮಾಡಿದ್ದು, ಈ ಬಗ್ಗೆ ಹಿರಿಯ ನಾಯಕರು ಕ್ರಮ ಕೈಗೊಳ್ಳದ ಕಾರಣ ಅವರು ಆ ಕ್ಷೇತ್ರಗಳಲ್ಲೂ ಸಿದ್ಧತೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಇದರಿಂದ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಕೋರ್‌ ಕಮಿಟಿ ನಡಾವಳಿ ಬಗ್ಗೆಯೂ ಅತೃಪ್ತಿ
ರಾಜ್ಯ ಬಿಜೆಪಿ ಕೋರ್‌ ಕಮಿಟಿ ಕಾರ್ಯ ವೈಖರಿಗೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೇ ನಾಯಕರ ಏಕಪಕ್ಷೀಯ ನಿರ್ಧಾರಗಳು ಕೆಳಹಂತದ ಮುಖಂಡರು ಹಾಗೂ ಕಾರ್ಯಕರ್ತರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ, ವಿಧಾನ ಪರಿಷತ್‌ಗೆ ಪಕ್ಷದಿಂದ ಆಯ್ಕೆಯಾದ ಕೆಲ ಸದಸ್ಯರ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.  ವಿಧಾನ ಪರಿಷತ್‌ ಸದಸ್ಯರ ಆಯ್ಕೆ ಮಾನದಂಡದ ಬಗ್ಗೆ ವ್ಯಕ್ತವಾದ ಆಕ್ಷೇಪಕ್ಕೆ ನಾಯಕರಿಂದ ಸೂಕ್ತ ಉತ್ತರ ಸಿಗಲಿಲ್ಲ. ಕೋರ್‌ ಕಮಿಟಿಯಲ್ಲೂ ಕೆಲವೇ ನಾಯಕರ ನಿಲುವು, ನಿರ್ಧಾರಗಳೇ ಜಾರಿಯಾಗುತ್ತಿವೆ. ಇದರಲ್ಲಿ ಬಹುಪಾಲು ವ್ಯಕ್ತಿಗತ ನಿರ್ಧಾರಗಳಾಗಿದ್ದು, ಪಕ್ಷಕ್ಕೆ ಅನುಕೂಲವಾಗುವಂತಹ ನಿರ್ಧಾರಗಳು ಬಹಳ ಕಡಿಮೆ ಎಂದು ಹೇಳಿದ್ದಾರೆ.

Advertisement

ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್‌
ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿರುವ ಬಿಜೆಪಿ ಹೈಕಮಾಂಡ್‌, ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸರ್ಕಾರ ರಚನೆ ಪ್ರಯತ್ನ ಒಂದೆಡೆ ನಡೆದರೆ ಲೋಕಸಭಾ ಚುನಾವಣೆ ಸಿದ್ಧತೆಯನ್ನೂ ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂಬುದು ವರಿಷ್ಠರ ನಿರೀಕ್ಷೆ. ಆದರೆ, ಅವರ ನಿರೀಕ್ಷೆಗೆ ಅನುಗುಣವಾಗಿ ಸಿದ್ಧತೆ ಕಾರ್ಯ ನಡೆಯದಿರುವುದು ಗಮನಕ್ಕೆ ಬಂದಿರುವ ಸಾಧ್ಯತೆ ಇದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ಮಧ್ಯಪ್ರವೇಶಿಸಿ ತಮ್ಮದೇ ಮೇಲ್ವಿಚಾರಣೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವ ವ್ಯವಸ್ಥೆ ತರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಜೊತೆ ಜೊತೆಗೆ ಲೋಕಸಭಾ ಚುನಾವಣೆಗೂ ಸರ್ವ ರೀತಿಯಲ್ಲಿ ಸಜ್ಜಾಗಬೇಕು ಎಂಬುದು ಹೈಕಮಾಂಡ್‌ನ‌ ಆಶಯ. ಇದೇ 11 ಹಾಗೂ 12ರಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆನಂತರ ಸಿದ್ಧತಾ ಕಾರ್ಯಗಳು ವೇಗ ಪಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ರಚನೆ ಆಸೆ ಬಿಟ್ಟು ಲೋಕಸಭಾ ಚುನಾವಣೆ ಸಿದ್ಧತೆಗೆ ಗಮನ ನೀಡುವುದು ಉತ್ತಮ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಸರ್ಕಾರ ರಚನೆಯಲ್ಲೇ ಮೈಮರೆತರೆ ಬಿಜೆಪಿಯ ಕೆಲ ದೌರ್ಬಲ್ಯಗಳನ್ನು ಬಳಸಿಕೊಂಡು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಲಾಭ ಪಡೆದುಕೊಳ್ಳುವ ಸಂಭವ ಇದೆ.
– ಲೆಹರ್‌ಸಿಂಗ್‌, ವಿಧಾನ ಪರಿಷತ್‌ ಸದಸ್ಯ

ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿಗಳು, ಸಂಚಾಲಕರ ನೇಮಕಕ್ಕೆ ಸಂಬಂಧಪಟ್ಟಂತೆ ಕೆಲ ಮಾರ್ಪಾಡುಗಳ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಶೀಘ್ರವೇ ಎಲ್ಲರೂ ಕಾರ್ಯಪ್ರವೃತ್ತವಾಗುವಂತೆ ರಾಜ್ಯಾಧ್ಯಕ್ಷರು ಕ್ರಮ ಕೈಗೊಳ್ಳಲಿದ್ದಾರೆ. ಹಾಗೆಯೇ ಎಂಟೂ ಮೋರ್ಚಾಗಳೂ ತಮಗೆ ವಹಿಸಿದ ಜವಾಬ್ದಾರಿಯಂತೆ ಕಾರ್ಯ ನಿರ್ವಹಿಸಲಿವೆ.
– ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next