ರಾಯ್‌ಪುರ: ‘ಜಾತಿ ಆಧಾರಿತ ಜನಗಣತಿಯನ್ನು ಬಿಜೆಪಿ ಎಂದಿಗೂ ವಿರೋಧಿಸಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಛತ್ತೀಸ್‌ಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ”ನಾವು ಮತದ ರಾಜಕೀಯ ಮಾಡುವುದಿಲ್ಲ.ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ.ಆದರೆ ಸರಿಯಾದ ಆಲೋಚನೆಯ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
”ಇದೆ ವೇಳೆ ಭೂಪೇಶ್ ಬಘೇಲ್ ಕಾಂಗ್ರೆಸ್ಸಿನ ‘ಪ್ರೀ-ಪೇಯ್ಡ್’ ಸಿಎಂ, ಅವರ ಸಿಂಧುತ್ವ ಕೊನೆಗೊಂಡಿದೆ. ನಾವಿಂದು ಛತ್ತೀಸ್‌ಗಢದ ಚುನಾವಣ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ.ನಮ್ಮ ಪ್ರಣಾಳಿಕೆ ಕೇವಲ ಪ್ರಣಾಳಿಕೆಯಲ್ಲ ಅದು ನಮಗೆ ನಿರ್ಣಯ ಪತ್ರವಾಗಿದೆ” ಎಂದರು.
”ಸುಳ್ಳು ಜಾಹೀರಾತಿನಲ್ಲಿ ಭೂಪೇಶ್ ಬಘೇಲ್‌ಗಿಂತ ಉತ್ತಮವಾದವರು ಯಾರೂ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ನಕಲಿ ಸಿಡಿ, ನಕಲಿ ಪೆನ್‌ಡ್ರೈವ್‌ಗಳನ್ನು ತಯಾರಿಸಿ, ಪತ್ರಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಅಳವಡಿಸಿದ ಸಾಧನೆ ಮಾಡಿ ಐದು ವರ್ಷಗಳ ಕಾಲ ಅಧಿಕಾರ ಹಿಡಿದರು” ಎಂದು ಕಿಡಿ ಕಾರಿದರು.
”ಕಾಂಗ್ರೆಸ್ ನವರು ಸಾಲ ಮನ್ನಾ ಮಾಡುವ ಬದಲು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ಹಣವನ್ನು ದೋಚಿದ್ದಾರೆ. ಅವರು ಭ್ರಷ್ಟಾಚಾರ ಮಾಡದಿದ್ದರೆ ಬೇರೆ ವಿಷಯಗಳು ನಡೆಯುತ್ತಿದ್ದವು. ಜನರು ಹಲವಾರು ಮಾನದಂಡಗಳ ಆಧಾರದ ಮೇಲೆ ಸರಕಾರಕ್ಕೆ ಮತ ಹಾಕುತ್ತಾರೆ. ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸುವುದು ಸೇರಿ ಕಾನೂನು ಮತ್ತು ಸುವ್ಯವಸ್ಥೆ ಸೇರಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ” ಎಂದರು.