ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಮೂರ್ಖರನ್ನಾಗಿಸುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಅದು ಬಿಟ್ಟು ಒಬ್ಬರದು ಕಿತ್ತು ಮತ್ತೊಬ್ಬರಿಗೆ ಕೊಡುವುದಲ್ಲ ಎಂದು ಟೀಕಿಸಿದರು.
ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇವೆಂದು ಆಸೆ ತೋರಿಸಿದ್ದರು. ಏನಾಯಿತು? ಬಂಜಾರ ಸಮುದಾಯದ ಆಕ್ರೋಶ ನೋಡಿದ್ದೇವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಿಜೆಪಿಯವರು ಮಾಡಿರುವ ಎಲ್ಲ ತಪ್ಪು ಸರಿ ಮಾಡುತ್ತದೆ. ಎಲ್ಲರಿಗೂ ನ್ಯಾಯ ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.
ಕೇಳುವುದರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ ಅಭಿಮಾನಿಗಳು ಕೋಲಾರದಲ್ಲಿ ಸ್ಪರ್ಧೆ ಮಾಡಿ ಎಂದು ಒತ್ತಾಯಿಸುವುದರಲ್ಲೂ ತಪ್ಪಿಲ್ಲ. ಸಿದ್ದರಾಮಯ್ಯ ಅವರು ಎರಡೂ ಕಡೆ ಸ್ಪರ್ಧೆಗೆ ಕೇಳಿದ್ದರಲ್ಲೂ ತಪ್ಪಿಲ್ಲ. ಆದರೆ, ಹೈಕಮಾಂಡ್ ಅದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ.ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂಗಳವಾರ ಕೇಂದ್ರ ಚುನಾವಣಾ ಸಮಿತಿ ಸಭೆ ಇದ್ದು,ಅಲ್ಲಿ ಎರಡನೇ ಪಟ್ಟಿ ಕುರಿತು ಚರ್ಚೆಯಾಗಿ ಅಂತಿಮಗೊಳ್ಳಲಿದೆ ಎಂದು ಹೇಳಿದರು.
ಕಾಳಹಸ್ತಿಯಲ್ಲಿ ರಾಹು,
ಕೇತು ಶಾಂತಿ ಹೋಮ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಆಂಧ್ರದ ತಿರುಪತಿ ಸಮೀಪದ ಶ್ರೀ ಕಾಳಹಸ್ತಿಗೆ ತೆರಳಿದ್ದಾರೆ. ಸೋಮವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್ ದಂಪತಿ ರಾಹು-ಕೇತು ಶಾಂತಿ ಹೋಮ-ಪೂಜೆ ಸಲ್ಲಿಸಲಿದ್ದಾರೆ. ಚುನಾವಣೆ ಸಮಯದಲ್ಲಿ ರಾಹು-ಕೇತು ಶಾಂತಿ ಹೋಮ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.