ಕೊಟ್ಟಿಗೆಹಾರ: ರಾಜ್ಯದಲ್ಲಿ ನಿರಂತರವಾದ ಗುಣಮಟ್ಟದ ವಿದ್ಯುತ್ ನೀಡಲು ಬಿಜೆಪಿ ಸರ್ಕಾರ ಬದ್ದತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.
ಬಣಕಲ್‌ನ 33/11 ಕೆವಿ ವಿದ್ಯುತ್ ಉಪಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬೆಳಕು ಯೋಜನೆಯ ಮೂಲಕ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ನೀಡುವ ಕಾರ್ಯ ಮಾಡಲಾಗಿದೆ. 1 ವರ್ಷದ ಅವಧಿಯಲ್ಲಿ 2.5 ಲಕ್ಷ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಅಮೃತ ಜ್ಯೋತಿ ಯೋಜನೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಅನುಕೂಲವಾಗಿದೆ. ನವೆಂಬರ್ 1ರಿಂದ ನವೆಂಬರ್ 15 ರವರೆಗೆ ಟ್ರಾನ್ಸ್ ಫಾರ್ಮರ್ ನಿರ್ವಹಣಾ ಅಭಿಯಾನದ ಮೂಲಕ ರಾಜ್ಯದ ಟ್ರಾನ್ಸ್ ಫಾರ್ಮರ್ ಗಳನ್ನು ಸದಾ ಸುಸ್ಥಿತಿಯಲ್ಲಿಡಲು ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಕಾಫಿ ಬೆಳೆಗಾರರಿಗೆ 10 ಎಚ್‌ಪಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರ ಸಣ್ಣ ಹಿಡುವಳಿದಾರರ ನಿಯಮಾವಳಿಗಳನ್ನು ಸಡಿಲ ಮಾಡಲು ಸಿದ್ದವಿದೆ. ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ 1 ವರ್ಷಕ್ಕೆ 16 ಸಾವಿರ ಕೋಟಿ ಸಬ್ಸಿಡಿ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಲಾಗಿದೆ ಎಂದರು.
ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, 2012 ರಲ್ಲಿ ಪ್ರಾರಂಭವಾದ ಬಣಕಲ್ ವಿದ್ಯುತ್ ಉಪಕೇಂದ್ರದ ಪ್ರಕ್ರಿಯೆ ಇಂದು ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಬಣಕಲ್ ವಿದ್ಯುತ್ ಉಪಕೇಂದ್ರದ ನಿರ್ಮಾಣದಿಂದ ಗುಣಮಟ್ಟದ ವಿದ್ಯುತ್ ನೀಡಲು ಅನುಕೂಲವಾಗಿದೆ. ಮಲೆನಾಡು ಭಾಗದಲ್ಲಿ ಮರ ಉರುಳುವ, ಮಳೆ ಹೆಚ್ಚಾಗಿ ಸುರಿಯುವ ಕಾರಣದಿಂದ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗುವುದು ಸಾಮಾನ್ಯವಾಗಿದ್ದು ನೆಲದಡಿಯಲ್ಲಿ ಕೇಬಲ್ ಅಳವಡಿಸಿ ವಿದ್ಯುತ್ ಸರಬರಾಜು ಮಾಡುವುದು ಹೆಚ್ಚು ಅನುಕೂಲ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಮಾತನಾಡಿ, ಸರ್ಕಾರ ರೈತರ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದು ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ರಾಜ್ಯ ಸರ್ಕಾರ ರೈತ ಸಮಸ್ಯೆಗಳಿಗೆ ಒತ್ತು ನೀಡಿ ರೈತಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ ಅಧ್ಯಕ್ಷೆ ಲೀಲಾವತಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ತಾಂತ್ರಿಕ ನಿರ್ದೇಶಕಿ ಡಿ. ಪದ್ಮಾವತಿ, ಮೆಸ್ಕಾಂ ಮುಖ್ಯ ಇಂಜಿನಿಯರ್ ಹೆಚ್.ಬಸಪ್ಪ, ಅಧೀಕ್ಷಕ ಇಂಜಿನಿಯರ್ ಬಿ. ಸೋಮಶೇಖರ್, ತಹಶೀಲ್ದಾರ್ ನಾಗರಾಜ್, ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಬಿ.ಎಂ., ತಾಲೂಕು ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ, ಹೋಬಳಿ ಅಧ್ಯಕ್ಷ ಅನೂಪ್ ಕುಮಾರ್, ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಹಳಸೆ ಶಿವಣ್ಣ, ಟಿ.ಎಂ ಗಜೇಂದ್ರ, ಪರೀಕ್ಷಿತ್ ಜಾವಳಿ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮುಂತಾದವರು ಇದ್ದರು.