Advertisement

ಬಿಜೆಪಿ ಬಣ ರಾಜಕೀಯಕ್ಕೆ ತೆರೆ?

08:37 AM Jul 13, 2017 | |

ದಾವಣಗೆರೆ: ಬುಧವಾರ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಸರ್ವ ಧರ್ಮಿಯರ ಉಚಿತ ಸಾಮೂಹಿಕ ಮಹೋತ್ಸವ ಪರೋಕ್ಷ
ರಾಜಕೀಯ ಚಟುವಟಿಕೆ ಅದರಲ್ಲೂ ಜಿಲ್ಲಾ ಬಿಜೆಪಿಯಲ್ಲಿನ ಭಿನ್ನಮತಕ್ಕೆ ತೇಪೆ ಹಚ್ಚುವ ಪ್ರಯತ್ನದ ಮುನ್ನುಡಿಗೆ ವೇದಿಕೆ ಕಲ್ಪಿಸಿದೆ.

Advertisement

ಸಾಮೂಹಿಕ ವಿವಾಹ ಮಹೋತ್ಸವದ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ. ಬಸವರಾಜನಾಯ್ಕ ಆಸೀನರಾಗಿದ್ದರು. ಕೆಲ ಹೊತ್ತಿನ ನಂತರ ವೇದಿಕೆಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಆಗಮಿಸುತ್ತಿದ್ದಂತೆ ತಮ್ಮ ಎಂದಿನ ದೇಶಾವರಿ ನಗೆ ಬೀರಿದ ರವೀಂದ್ರನಾಥ್‌ ಸಿದ್ದೇಶ್ವರ್‌ ಗೆ ಹಸ್ತಲಾಘವ ನೀಡಿ, ಸ್ವಾಗತಿಸಿದರು. ಶಿವಯೋಗಿಸ್ವಾಮಿ, ಬಸವರಾಜನಾಯ್ಕ ಸಹ ಸಿದ್ದೇಶ್ವರ್‌ಗೆ ಸ್ವಾಗತಿಸಿದರು.

ಸಿದ್ದೇಶ್ವರ್‌-ರವೀಂದ್ರನಾಥ್‌ ಒಟ್ಟಿಗೆ ಕೂತು ಮಾತುಕತೆ ನಡೆಸಿದರು. ಸ್ವಲ್ಪ ಸಮಯದ ನಂತರ ವೇದಿಕೆಗೆ ಬಂದ
ವಿಧಾನ ಪರಿಷತ್‌ ನಾಯಕ ಕೆ.ಎಸ್‌. ಈಶ್ವರಪ್ಪ ಸಿದ್ದೇಶ್ವರ್‌-ರವೀಂದ್ರನಾಥ್‌  ಒಟ್ಟಿಗೆ ಕುಳಿತದ್ದನ್ನು ನೋಡಿ ಸಂತೋಷದ
ನಗೆ ಬೀರಿದರು. ಇಬ್ಬರಿಗೆ ಹಸ್ತಲಾಘವ ಮಾಡಿ, ಸ್ವಲ್ಪ ಮಾತನಾಡಿ, ಅವರಿಗೆ ಮೀಸಲಿಟ್ಟಿದ ಆಸನದಲ್ಲಿ ಕುಳಿತರು.
ದೂರದಲ್ಲಿದ್ದ ಶಿವಯೋಗಿಸ್ವಾಮಿಯವರನ್ನು ಪಕ್ಕದಲ್ಲಿ ಕರೆದು ಮಾತನಾಡಿದರು. ವೇದಿಕೆಗೆ ಆಗಮಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ 
ಯಶವಂತರಾವ್‌ ಜಾಧವ್‌ ರವೀಂದ್ರನಾಥ್‌ ಗೆ ನಮಸ್ಕರಿಸಿ, ಹಸ್ತಲಾಘವ ಮಾಡಿದರು. ಈ ಮಧ್ಯೆ ಈಶ್ವರಪ್ಪ-ಸಿದ್ದೇಶ್ವರ್‌-
ರವೀಂದ್ರನಾಥ್‌ ಬಹು ಗಹನವಾಗಿಯೇ ಚರ್ಚಿಸಿದರು. ಈಶ್ವರಪ್ಪ ಏನೇನೋ ಸೂಚನೆಯನ್ನೂ ಕೊಟ್ಟರು. ಸಂಸದ ಸಿದ್ದೇಶ್ವರ್‌ ನಗು ನಗುತ್ತಲೇ ವೇದಿಕೆಯಿಂದ  ನಿರ್ಗಮಿಸಿದರು.

ಆ ನಂತರ ಈಶ್ವರಪ್ಪ ,ರವೀಂದ್ರನಾಥ್‌ ಮಾತುಕತೆ ಮುಂದುವರೆಯಿತು. ಕೆಲ ಸಮಯದ ನಂತರ ರವೀಂದ್ರನಾಥ್‌ ಜೊತೆಗೆ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೀರೇಶ್‌ ಹನಗವಾಡಿ, ಬಿ.ಎಂ. ಸತೀಶ್‌ ಮತ್ತಿತರರು ಬಂದ ನಂತರ ಮಾತುಕತೆ ಬಲು ಜೋರಾಗಿಯೇ ಮುಂದುವರೆಯಿತು. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಬಣಗಳಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವ ಮುಖಂಡರನ್ನು ಒಗ್ಗೂಡಿಸುವ ಉದ್ದೇಶದಿಂದಲೇ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಈಶ್ವರಪ್ಪರ ಜೊತೆಗೆ ಎಲ್ಲರನ್ನೂ ಸೇರಿಸುವ ಪ್ರಯತ್ನ ಪ್ರಬಲವಾಗಿ ನಡೆಸಲಾಗಿತ್ತು. ಬುಧವಾರ ಸಂಜೆ ಸ್ವಾಮೀಜಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಉಭಯ ನಾಯಕರು ಚರ್ಚೆಯೂ ನಡೆಯಲಿದೆ ಎಂದು ತಿಳಿದು ಬಂದಿದೆ. ಇಂದಿನ ಬೆಳವಣಿಗೆಯನ್ನ ಗಮನಿಸಿದ್ದಲ್ಲಿ
ಜಿಲ್ಲಾ ಬಿಜೆಪಿಯಲ್ಲಿದ್ದ ಮುನಿಸು… ಕಾಣೆಯಾಗಿ ಕಮಲ ಪಾಳೆಯದ ನಾಯಕರು ಒಗ್ಗೂಡುವ ಕಾಲ ಸಮೀಪಿಸಿದಂತೆ ಕಂಡು
ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next