ಬೆಂಗಳೂರು: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಪಡೆದಿರುವ ಬಿಜೆಪಿ ದಕ್ಷಿಣದ ಹೆಬ್ಟಾಗಿಲು ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರಲು ಯುಪಿ ಮಾದರಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ಅದಕ್ಕಾಗಿ ಅಭಿವೃದ್ಧಿ ಮಂತ್ರವನ್ನೇ ಚುನಾವಣಾ ಅಜೆಂಡಾ ಮಾಡಿಕೊಂಡು ಗುಪ್ತ ಮತದಾರರ ಗಟ್ಟಿಗಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.
ಕರ್ನಾಟಕದಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಮೂರಂಕಿ ಮುಟ್ಟುವುದು ಬಹಳ ಕಷ್ಟ ಎಂಬ ಮಾಹಿತಿ ಪಕ್ಷದ ರಾಷ್ಟ್ರೀಯ ನಾಯಕರಿಗೆ ಲಭ್ಯವಾಗಿದ್ದು, ಟಾರ್ಗೆಟ್ 150 ಮುಟ್ಟಲು ಚುನಾವಣೆಗೆ ಉತ್ತರ ಪ್ರದೇಶ ಮಾದರಿ ಅನುಸರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಐದು ವರ್ಷದ ಆಡಳಿತದ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಯೋಗಿ ಆದಿತ್ಯನಾಥ ಹಿಂದುತ್ವದ ಉಗ್ರ ಪ್ರತಿಪಾದಕರಾಗಿದ್ದರು. ಅದರ ಹೊರತಾಗಿಯೂ 5 ವರ್ಷದಲ್ಲಿ ಅವರು ರಾಜ್ಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಹಾಗೂ ಅವರಿಗೆ ಬೇರೆ ಯಾವ ಬೇಡಿಕೆಗಳಿವೆ ಎಂದು ಫಲಾನುಭವಿಗಳನ್ನು ಭೇಟಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸೈಲೆಂಟ್ ಓಟರ್ಸ್‌ರನ್ನು ಭದ್ರ ಪಡಿಸಿಕೊಳ್ಳುವ ಕಾರ್ಯ ಮಾಡಿ, ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿಯೂ ಯುಪಿ ಮಾದರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳಿಗೆ ಲಂಚ ನೀಡದೇ, ಯಾವುದೇ ಸರ್ಕಾರಿ ಕಚೇರಿಗೆ ಅಲೆಯದೇ ನೇರವಾಗಿ ಫಲಾನುಭವಿಗಳ ಮನೆಗಳಿಗೆ ತಲುಪಿಸಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಂದಿಲ್ಲೊಂದು ಯೋಜನೆಗಳಿಂದ ಫಲಾನುಭವಿಗಳಾಗಿರುವವರು ಪ್ರತೀ ಮನೆಯಲ್ಲಿಯೂ ದೊರೆಯುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
ಪ್ರಮುಖವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರಾಜ್ಯದ ಎಲ್ಲ ರೈತರಿಗೂ ನೇರವಾಗಿ ಅವರ ಅಕೌಂಟ್ ಗೆ ಹಣ ವರ್ಗಾವಣೆಯಾಗುತ್ತಿದೆ. ಉಜ್ವಲ ಯೋಜನೆ ಮೂಲಕ ಬಡವರಿಗೆ ಅಡುಗೆ ಗ್ಯಾಸ್ ವಿತರಣೆ, ಕೊರೊನಾ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ವಿತರಣೆ, ವೃದ್ಧಾಪ್ಯ, ವಿಧವಾ ವೇತನ ಹೆಚ್ಚಳ, ರೈತರ ಮಕ್ಕಳಿಗೆ ರಾಜ್ಯಸರ್ಕಾರದ ವಿದ್ಯಾನಿಧಿ ಯೋಜನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳ ನಿರ್ಮಾಣ ಸೇರಿದಂತೆ ಎಲ್ಲ ಯೋಜನೆಗಳ ಫಲಾನುಭವಿಗಳನ್ನು ನೇರವಾಗಿ ಭೇಟಿ ಮಾಡಿ ಮನವರಿಕೆ ಮಾಡುವ ಕಾರ್ಯ ಆರಂಭಿಸಿದೆ.
ಮನೆ ಮನೆ ಭೇಟಿ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ಹಾಗೂ ಅರ್ಹ ಫಲಾನುಭವಿಗಳಿದ್ದರೂ, ಯೋಜನೆ ಗಳು ತಲುಪುವಲ್ಲಿ ಆಗಿರುವ ಲೋಪಗಳೇನು ಎನ್ನುವುದನ್ನು ತಿಳಿದುಕೊಳ್ಳಲು ರಾಜ್ಯ ಬಿಜೆಪಿ ಪ್ರತಿ ಮನೆಗೂ ಭೇಟಿ ನೀಡುವ ಕಾರ್ಯ ಆರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿರುವ ಪಕ್ಷದ ಪೇಜ್ ಪ್ರಮುಖರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಒಂದು ಪೇಜ್‌ಗೆ 6 ಜನ ಪ್ರಮುಖರು ಫಲಾನುಭವಿ ಗಳಿಗೆ ತಲುಪಿರುವ ಯೋಜನೆಗಳ ಮಾಹಿತಿ ಪಡೆಯುವುದರ ಜೊತೆಗೆ ಅದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಕೊಡುಗೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆರಂಭಿಸಿದ್ದಾರೆ. ಜೊತೆಗೆ ಅವರ ಬೇಡಿಕೆಗಳೇನು ಎನ್ನುವ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶೇ.25 ರಷ್ಟು ಪೇಜ್ ಪ್ರಮುಖರು ಫಲಾನುಭವಿಗಳ ಮನೆಗಳನ್ನು ತಲುಪಿದ್ದು, ಶೀಘ್ರವೇ ಫಲಾನುಭವಿಗಳ ಗುರುತಿಸುವಿಕೆ ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರ್ಕಾರದಿಂದ ಪ್ರಯೋಜನ ಪಡೆದಿರುವ ಫಲಾನುಭವಿಗಳು ದೊಡ್ಡ ಪ್ರಮಾಣದಲ್ಲಿದ್ದಾರೆ. ಅವರೆಲ್ಲ ಸೈಲೆಂಟ್ ಓಟರ್ಸ್. ಅವರು ಯಾವುದೇ ಸಮೀಕ್ಷೆಗಳ ವ್ಯಾಪ್ತಿಗೆ ಬರುವುದಿಲ್ಲ. ಅವರನ್ನು ಹುಡುಕಿ ಅವರಿಗೆ ಬೇರೆ ಏನು ಬೇಕು ಎನ್ನುವುದನ್ನು ಕೇಳಿ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
●ಎಂ.ಜಿ. ಮಹೇಶ್, ಬಿಜೆಪಿ ಮುಖ್ಯ ವಕ್ತಾರ
ಶಂಕರ ಪಾಗೋಜಿ