ಉಡುಪಿ: ಸರಕಾರಿ ಸೇವೆಗಳು ಸಮಯ ಮಿತಿಯೊಳಗೆ ಸಿಗಬೇಕೆಂಬ ಉದ್ದೇಶದಿಂದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಕ್ಕೆ ತರಲಾಗಿದ್ದ “ಸಕಾಲ ಯೋಜನೆ’ಯನ್ನು ಪುನಶ್ಚೇತನಗೊಳಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಜ.4ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಜ.1ರಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರಗಿದ ಪಂಚಾಯತ್‌ರಾಜ್ ಪ್ರಕೋಷ್ಠದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಅಧೀನದಲ್ಲೇ ಬರುವ ಸಕಾಲ ಸೇವೆ ಆಡಳಿತ ವ್ಯವಸ್ಥೆಯ ವೈಫಲ್ಯದಿಂದ ನಿಷ್ಕ್ರಿಯವಾಗಿದೆ. ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜಾತಿ, ಆದಾಯ ಪ್ರಮಾಣಪತ್ರಗಳು ಕೂಡ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಸಿ ಕಚೇರಿಗೆ ಮೆರವಣಿಗೆ
ಬಿಜೆಪಿ ಪಂಚಾಯತ್‌ರಾಜ್ ಪ್ರಕೋಷ್ಠದ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜ.4ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಮಣಿಪಾಲ ಬಸ್‌ನಿಲ್ದಾಣ ಸಮೀಪ ಸಭೆ ಸೇರಿ ಅನಂತರ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಸಾಗಲಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಮನ ಸಲ್ಲಿಸುವುದರ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್, ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ವಕ್ತಾರ ಕಟಪಾಡಿ ಶಂಕರ ಪೂಜಾರಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್, ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಸುಧಾಕರ, ಬಿಜೆಪಿ ಜಿ.ಪಂ. ಮತ್ತು ತಾ.ಪಂ. ಸದಸ್ಯರು ಹಾಗೂ ಪಂಚಾಯತ್‌ರಾಜ್ ಪ್ರಕೋಷ್ಠದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪಂಚಾಯತ್‌ರಾಜ್ ಪ್ರಕೋಷ್ಠದ ಸಹ ಸಂಚಾಲಕ ಅಲೆವೂರು ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಕಾಪು ಮಂಡಲ ಪ್ರಕೋಷ್ಠದ ಸಂಚಾಲಕ ಹರೀಶ್ ಸಾಲ್ಯಾನ್ ವಂದಿಸಿದರು.