Advertisement

ಇವಿಎಂ ಬಳಸಿ ಮತ ಕದಿಯುತ್ತಿದೆ ಬಿಜೆಪಿ: ಧನ್ನಿ

06:43 AM Jan 01, 2019 | |

ಆಳಂದ: ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಕೈ ಬಲಪಡಿಸಿ, ಲೋಕಸಭೆ ಚುನಾವಣೆಯಲ್ಲಿ ಮತ್ತಷ್ಟು ಶಕ್ತಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸೇರಿದಂತೆ ರಾಷ್ಟ್ರವ್ಯಾಪಿ ಕಾರ್ಯಕರ್ತರೆಲ್ಲ ಒಗ್ಗೂಡಿ ಡಿ.12ರಿಂದ ಜ.12ರ ವರೆಗೆ ಮಾಯಾವತಿ ಅವರ 63ನೇ ಜನ್ಮದಿನದ ಅಂಗವಾಗಿ ಆರ್ಥಿಕ ಸಂಯೋಗ ದಿನದ ಅಭಿಯಾನ ಪ್ರಾರಂಭಿಸಿದಂತೆ ಸೋಮವಾರ ತಾಲೂಕಿನಲ್ಲೂ ಚಾಲನೆ ನೀಡಲಾಯಿತು.

Advertisement

ಜ.15ರಂದು 10 ಜಿಲ್ಲೆಗಳನ್ನು ಒಳಗೊಂಡು ಕಲಬುರಗಿಯಲ್ಲೇ ವಿಭಾಗ ಮಟ್ಟದಲ್ಲಿ ಕುಮಾರಿ ಮಾಯಾವತಿ ಅವರ 63ನೇ ಜನ್ಮದಿನ ಆಚರಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 63 ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಬಿಎಸ್‌ಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ
ಕಲಬುರಗಿ ವಿಭಾಗೀಯ ಉಸ್ತುವಾರಿ ಮಹಾದೇವ ಬಿ. ಧನ್ನಿ ಹೇಳಿದರು. 

ಚುನಾವಣೆ ಮುನ್ನವೇ ಮತದಾರರಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಹಾಗೂ ಅವರಿಂದ ಆರ್ಥಿಕ ಸಹಾಯ ಪಡೆಯಲು ಗ್ರಾಮೀಣಮಟ್ಟ ಸೇರಿದಂತೆ ಪಟ್ಟಣದಲ್ಲಿ ಸಂಚರಿಸಲಾಗುವುದು. ಮತದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌, ಬಿಜೆಪಿ ದೇಶವನ್ನು 70 ವರ್ಷಗಳ ಕಾಲ ಆಳಿದರೂ ಸಂವಿಧಾನ ಆಶಯದಂತೆ ನಡೆದುಕೊಂಡಿಲ್ಲ. ವ್ಯವಸ್ಥೆ ಖಾಸಗೀಕರಣಗೊಳಿಸಿ ವಿದ್ಯಾವಂತರಿಗೆ ಅತಂತ್ರಗೊಳಿಸಿದ್ದು, ಇಂದಿಗೂ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಸ್ವತ್ಛ ಭಾರತ ಕೇವಲ ಹೆಸರಿಗೆ ಮಾತ್ರ, ಸರ್ಕಾರಿ ಆಸ್ಪತ್ರೆಗಳು ದನದ ಕೊಟ್ಟಿಗೆಯಾಗಿವೆ. ವಸತಿ ನಿಲಯಗಳು ಹಂದಿಗಳ ಗೂಡಾಗಿವೆ. ಶಿಕ್ಷಣ ಖಾಸಗೀಕರಣದಿಂದ ಅತಿಯಾದ ಶುಲ್ಕ ಭರಿಸುವಂತಾಗಿದೆ. ಪ್ರಧಾನಿ ಮೋದಿ ಅವರು, ಸಬಕಾ ಸಾತ್‌, ಸಬಕಾ ವಿಕಾಸ್‌ ಎಂದು ಹೇಳಿದ್ದು ಸುಳ್ಳಿನಿಂದ ಕೂಡಿದೆ. ಜನರ ಖಾತೆಗೆ 15 ಲಕ್ಷ ರೂ. ನೀಡುವ ಭರವಸೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದು ಜನರಿಗೆ ಮೋಸಮಾಡಿದ್ದಾರೆ. 

ನೋಟು ಅಮಾನ್ಯಿಕರಣದಿಂದ ಜನರಿಗೆ ತೊಂದರೆ ಮಾಡಿ, ಜಂಗಲ್‌ ರಾಜ್ಯವಾಗಿಸಿದ್ದಾರೆ. ಬಿಜೆಪಿ ಸರ್ಕಾರ ಇರುವ ಕಡೆ ದಲಿತ ಮಹಿಳೆಯರು ಮೇಲೆ ದೌರ್ಜನ್ಯ, ಗೂಂಡಾಗಿರಿ, ದಲಿತರ ಹಲ್ಲೆ ನಡೆದರೂ ಕಣ್ಣುಮುಚ್ಚಿಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪ್ರಜಾಪ್ರಭುತ್ವ ಗಾಳಿಗೆ ತೂರಿ ಚುನಾವಣೆಯಲ್ಲಿ ಇವಿಎಂ ಬಳಸಿ ಮತಗಳನ್ನು ಕದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಮತಪತ್ರಗಳ ಮೂಲಕವೇ ಮತದಾನ ನಡೆಯಬೇಕು. ಆದರೆ ಯಂತ್ರಗಳ ಮೋಸದಿಂದ ದೇಶದ ಶೇ. 85ರಷ್ಟು ಜನರ ಹಿತ ಕಾಯುವ ಬದಲು ಬೆರಳೆಣಿಕೆಯಷ್ಟೇ ಜನರ ಹಿತಕಾಯುತ್ತಿದ್ದಾರೆ. ಮೋದಿ ಅವರಿಗೆ ಬಂಡವಾಳ ಶಾಹಿಗಳೇ ಆಸ್ತಿಯಾದರೆ, ಅಕ್ಕ ಮಾಯಾವತಿ ಅವರಿಗೆ ಒಂದು ವೋಟಿನ ಜೊತೆಗೆ ಒಂದು ನೋಟು ನೀಡಿ ಆರ್ಥಿಕ ಮತ್ತು ಅಧಿಕಾರದ ಶಕ್ತಿ ತುಂಬುವ ಜನರೇ ಆಸ್ತಿಯಾಗಲಿದ್ದಾರೆ ಎಂದು ಹೇಳಿದರು.

ಶ್ಯಾಮರಾವ್‌ ಕಾಂಬಳೆ ಹೆಬಳಿ, ಸೂರ್ಯಕಾಂತ ಜಿಡಗಾ, ಮಲ್ಲಿಕಾರ್ಜುನ ವೈಜಾಪುರ ಹಾಗೂ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next