ಲಕ್ನೋ: ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಜತೆಗೆ, ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು ಮತಪತ್ರಗಳನ್ನೇ ಬಳಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ತಮ್ಮ 67ನೇ ಜನ್ಮದಿನ ಪ್ರಯುಕ್ತ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, “ಈ ವರ್ಷ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣ ಹಾಗೂ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಇಲ್ಲಿ ಎಲ್ಲೂ ನಾವು ಯಾವುದೇ ಪಕ್ಷದೊಂದಿಗೆ ಕೈಜೋಡಿಸುವುದಿಲ್ಲ. ಬಿಎಸ್‌ಪಿ ಏಕಾಂಗಿಯಾಗಿ ಕಣಕ್ಕಿಳಿಯಲಿದೆ.
ಈ ಹಿಂದೆ ಮೈತ್ರಿ ಮಾಡಿಕೊಂಡಾಗ ನಮ್ಮ ಪಕ್ಷಕ್ಕೆ ಯಾವುದೇ ಅನುಕೂಲ ಆಗಿಲ್ಲ’ ಎಂದು ಹೇಳಿದ್ದಾರೆ.