Advertisement
ಕೇಂದ್ರ ಬಿಜೆಪಿ, ಅಮಿತ್ ಶಾ ಹಾಗೂ ರಾಜ್ಯ ನಾಯಕರು ಅಭ್ಯರ್ಥಿ ಆಯ್ಕೆ ಬಗ್ಗೆ ನಡೆಸಿದ ಸರ್ವೇ ವರದಿ ಇಟ್ಟುಕೊಂಡು ಬುಧವಾರ ರಾತ್ರಿ ಸುಮಾರು 5 ತಾಸು ಸಭೆ ನಡೆಸಿದ್ದಾರೆ. ಆದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಆದರೆ ಸಭೆಯಲ್ಲಿ ಅಮಿತ್ ಶಾ ಟಿಕ್ ಮಾಡಿದ ಹೆಸರು ಯಾವುದು ಎಂಬ ಬಗ್ಗೆ ಬಿಜೆಪಿಯ ಯಾವ ನಾಯಕರೂ ತುಟಿ ಬಿಚ್ಚಿಲ್ಲ.
ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೋ, ಬೇಡವೋ ಎಂಬ ವಿಚಾರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಈಗ ಲೋಕಸಭೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವರ ಭವಿಷ್ಯವೂ ಇತ್ಯರ್ಥವಾಗಿಲ್ಲ. ಉತ್ತರ ಕನ್ನಡ ಲೋಕಸಭಾ ಆಕಾಂಕ್ಷಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಅಥವಾ ಬೆಂಗಳೂರು ಉತ್ತರದಲ್ಲಿ ಸ್ಥಳ ನಿಯೋಜನೆ ಬಯಸಿರುವ ಸಿ.ಟಿ.ರವಿ, ಚಿಕ್ಕಬಳ್ಳಾಪುರ ಆಕಾಂಕ್ಷಿ ಡಾ| ಕೆ.ಸುಧಾಕರ್ ಹೆಸರನ್ನು ಇನ್ನೂ ವೇಟಿಂಗ್ ಲಿಸ್ಟ್ ನಲ್ಲಿಯೇ ಇಡಲಾಗಿದೆ. ಆದರೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಬಳ್ಳಾರಿ ಲೋಕಸಭಾ ಕಣಕ್ಕೆ ಇಳಿಸುವ ಬಗ್ಗೆ ಅಮಿತ್ ಶಾ ಬಹುತೇಕ ಹಸುರು ನಿಶಾನೆ ತೋರಿದ್ದಾರೆ ಎಂದು ತಿಳಿದು ಬಂದಿದೆ. “ಹಾಲಿ ಸಂಸದರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ, ತೀರ್ಮಾನ ನಾವು ಮಾಡುತ್ತೇವೆ’ ಎಂದು ವರಿಷ್ಠರು ಸೂಚಿಸಿದ್ದು, ಪರ-ವಿರೋಧ ಅಭಿಪ್ರಾಯಗಳೆಲ್ಲವನ್ನೂ ಆಲಿಸಲಾಗಿದೆ. ಆದರೆ ವಿರುದ್ಧ ಅಭಿಪ್ರಾಯ ಇರುವುದು ನಾಯಕರುಗಳಧ್ದೋ, ಮತದಾರರಧ್ದೋ ಅಥವಾ ಕಾರ್ಯಕರ್ತರಧ್ದೋ ಎಂಬ ಪ್ರಶ್ನೆಯನ್ನು ಒತ್ತಿ ಒತ್ತಿ ಕೇಳಲಾಗಿದೆ.
Related Articles
“ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ವಿಚಾರವನ್ನು ನಮಗೆ ಬಿಡಿ’ ಎಂದು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಆದೇ ರೀತಿ ಮಂಡ್ಯ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆಯೂ ಸೂಚನೆ ನೀಡಲಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಹಾವೇರಿ ಪೈಕಿ ಎಲ್ಲಿಂದ ಜಗದೀಶ್ ಶೆಟ್ಟರ್ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Advertisement
ಹಳಬರಿಗೆ ಕೈ ತಪ್ಪುವ ಸಾಧ್ಯತೆ ಇಲ್ಲ: ಬಿಎಸ್ವೈಹೆಚ್ಚಿನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಹಳಬರಿಗೆ ಟಿಕೆಟ್ ತಪ್ಪುತ್ತದೆಯೇ ಎಂದು ದಿಲ್ಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಸದ್ಯ ಆ ರೀತಿ ಏನೂ ಇಲ್ಲ’ ಎಂದು ಹೇಳಿದ್ದಾರೆ. 28 ಲೋಕಸಭಾ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾವೇರಿಗೆ ಬೊಮ್ಮಾಯಿ ಖಚಿತ
ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಯವಾದಂತಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ಪರ ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು ಪರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ. ಜೆಡಿಎಸ್‌ಗೆ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಖಚಿತವಾಗಿದ್ದು, ಸೀಟು ಹಂಚಿಕೆ ಸಂಬಂಧ ಮೈತ್ರಿ ಪಕ್ಷಗಳ ಸಭೆ ನಡೆಸುವ ಯಾವುದೇ ಸಾಧ್ಯತೆಗಳು ಇಲ್ಲ ಎಂದು ತಿಳಿದು ಬಂದಿದೆ.