Advertisement
ಈ ವಿಚಾರವು ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿ ಕೊನೆಗೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ಮೇಲ್ಮನೆಯಲ್ಲಿ ಮಂಗಳವಾರ ನಡೆಯಿತು.
ಇದಕ್ಕೆ ಉತ್ತರಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. 12 ತಿಂಗಳುಗಳಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಜತೆಗೆ ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಅವಧಿ 30 ತಿಂಗಳು ಆಗಿರುವ ಕಡೆಯೂ ಮೀಸಲಾತಿ ನಿಗದಿಪಡಿಸಬೇಕಾಗಿದೆ. ಆದಷ್ಟು ಬೇಗ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕ್ರಮ ಕೈಗೊಳ್ಳಲಾಗುವುದು. ಚುನಾಯಿತ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಆಡಳಿತ, ಅಭಿವೃದ್ಧಿಗೆ ಹಿನ್ನಡೆ ಆಗುತ್ತಿಲ್ಲ. ಎಲ್ಲ ಕಡೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
Related Articles
ಇದಕ್ಕೆ ಸಮಾಧಾನಗೊಳ್ಳದ ಎಸ್. ರವಿ, ಸರಕಾರದ ಉತ್ತರ ಸಮರ್ಪಕವಾಗಿಲ್ಲ. ಇಂತಹ ಉತ್ತರ ನೋಡಿ ಸುಮ್ಮನೆ ಕುಳಿತುಕೊಳ್ಳುವುದು ಹೇಗೆ? ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಯೋಗ್ಯತೆ ಈ ಸರಕಾರಕ್ಕಿಲ್ಲ. ಇನ್ನು 15 ದಿನಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗ ಏನೂ ಮಾಡಲು ಆಗುವುದಿಲ್ಲ. ಸರಕಾರದ ಈ ಉತ್ತರಕ್ಕೆ ಉಪ್ಪು ಖಾರ ಹಾಕಿ ನೆಕ್ಕಬೇಕಷ್ಟೆ ಎಂದು ಹರಿಹಾಯ್ದರು. ಇದರಿಂದ ಕೋಪಗೊಂಡ ಆಡಳಿತ ಪಕ್ಷದ ಸದಸ್ಯರು ಎಸ್. ರವಿ ವಿರುದ್ಧ ಮುಗಿಬಿದ್ದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವರಾದ ಮುರುಗೇಶ ನಿರಾಣಿ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು ಅವರು ಎಂಟಿಬಿ ನಾಗರಾಜ್ ಬೆಂಬಲಕ್ಕೆ ನಿಂತರು. ಇದಕ್ಕೆ ಕಾಂಗ್ರೆಸ್ ಸದಸ್ಯರು, ಇಲಾಖೆಯ ಸಚಿವರು ಸಮರ್ಥರಿದ್ದಾರೆ. ಐದಾರು ಸಚಿವರು ಎದ್ದುನಿಂತು ಉತ್ತರ ಕೊಟ್ಟರೆ ನಾವು ಕೇಳುವುದಿಲ್ಲ. ಸಚಿವರಿಗೆ ಉತ್ತರ ಕೊಡಲು ಅಧಿಕಾರವಿದೆ ಎಂದು ತಿರುಗೇಟು ನೀಡಿದರು.
Advertisement
ಕಾಂಗ್ರೆಸ್ ಸಭಾತ್ಯಾಗಹಿಂದುಳಿದ ವರ್ಗಗಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ| ಭಕ್ತವತ್ಸಲ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮರ್ಥನೆ ನೀಡಿದರು. ನ್ಯಾಯಾಲಯ, ನ್ಯಾ| ಭಕ್ತವತ್ಸಲ ಸಮಿತಿ ನೆಪ ಹೇಳುತ್ತಿರುವ ಸರಕಾರವು ಹಿಂದುಳಿದ ವರ್ಗಗಳ ವಿರೋಧಿ, ಸ್ಥಳೀಯ ಆಡಳಿತ ಸಂಸ್ಥೆಗಳ ವಿರೋಧಿ ಎಂದು ಧಿಕ್ಕಾರ ಕೂಗಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.