ಬೆಂಗಳೂರು: ಅಧಿಕಾರದಲ್ಲಿದ್ದಾಗ ಶಾಸಕರು ನಿಮ್ಮ ಬಳಿ ಅಭಿವೃದ್ದಿ ಕೆಲಸಗಳ ಪತ್ರಗಳನ್ನು ತಂದಾಗ ಅಲ್ಲಿ ಭೇಟಿ ಮಾಡು, ಇಲ್ಲಿ ಭೇಟಿ ಮಾಡು ಎಂದ ನೀವುಗಳು ಎಷ್ಟು ಮಾನ್ಯತೆ ನೀಡಿದ್ದೀರಿ? ಎಷ್ಟು ಗೌರವ ನೀಡಿದ್ದೀರಿ? ನೀವುಗಳು ಸರಿಯಿದ್ದರೆ ಇಂತಹ ಪರಿಸ್ಥಿತಿ ಯಾಕೆ ಬರುತ್ತಿತ್ತು ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
“80 ಜನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾರದವರು ಈಗ ಉಪಚುನಾವಣೆಯಲ್ಲಿ ಇಲ್ಲಸಲ್ಲದ ಮಾತನಾಡುತ್ತಾರೆ. ನೀವುಗಳು ತಪ್ಪು ಮಾಡಿ ಈಗ ಯಾಕೆ ಮರೆಮಾಚುತ್ತಿದ್ದೀರಿ” ಎಂದು ಪ್ರಶ್ನಿಸಿದರು.
“ನೀವುಗಳು ಸರಿ ಇದ್ದರೆ ಇಂತಹ ಪರಿಸ್ಥಿತಿ ಯಾಕೆ ಬರ್ತಿತ್ತು, ಒಬ್ಬ ಪಕ್ಷ ಬಿಟ್ಟು ಬಂದಿದ್ದಲ್ಲ. ಏಕಕಾಲಕ್ಕೆ 15-16 ಜನರು ಬಂದಿದ್ವಿ. ನಾವು ನಮ್ಮ ಸ್ವಂತ ಕೆಲಸಕ್ಕೆ, ಸ್ವಾರ್ಥಕ್ಕೆ ಬಂದಿಲ್ಲ, ಮತದಾರರ ದೇವರುಗಳ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸ ಮಾಡಲು ಸಾಧ್ಯವಿಲ್ಲದರೆ ಆ ಜಾಗದಲ್ಲಿ ಇರಬಾರದು ಎಂದು ತೀರ್ಮಾನಿಸಿ ನಾವು ಬಿಜೆಪಿಗೆ ಬಂದೆವು” ಎಂದು ಹೇಳಿದರು.
ಇದನ್ನೂ ಓದಿ:ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ
ಮುನಿರತ್ನಗೆ ಸಚಿವ ಸ್ಥಾನ: ಬಿಎಸ್ ವೈ
ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಚುನಾವಣೆ ಮುಗಿದ ಕೂಡಲೇ ನೂರಕ್ಕೆ ನೂರರಷ್ಟು ಮುನಿರತ್ನರನ್ನು ಮಂತ್ರಿಯನ್ನಾಗಿ ಮಾಡುತ್ತೇನೆ. ಉಪ ಚುನಾವಣೆ ಮುಗಿದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದರು.