ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಬೆಂಗಳೂರಿನ ಬಿಜೆಪಿ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಬೆಂಗಳೂರಿನ ಮೂರು ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಉಸ್ತುವಾರಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 15 ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕಟೀಲ್, ಕೋವಿಡ್ ಸಮಯದಲ್ಲಿ ಹಿಂದೆ ಪಕ್ಷದ ಕಡೆಯಿಂದ ಮಾಡಿದ್ದ ಕೆಲಸಗಳನ್ನು ಮುಂದುವರಿಸುವ ಬಗ್ಗೆ, ಬಿಬಿಎಂಪಿ ವಾರ್ಡ್ ಗಳಲ್ಲಿ ವಾರ್ ರೂಂ ತೆರೆಯುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ನಲಪಾಡ್ ಹಲ್ಲೆ ಮಾಡಿಲ್ಲ,ಯಾರಾದರೂ ದೂರು ಕೊಟ್ಟಿದ್ದಾರಾ : ಈಶ್ವರ್ ಖಂಡ್ರೆ ಪ್ರಶ್ನೆ
ವೀಕೆಂಡ್ ಕರ್ಫ್ಯೂ ವಿಚಾರವಾಗಿ ಮಾತನಾಡಿದ ನಳಿನ ಕಟೀಲ್, ಮುಖ್ಯಮಂತ್ರಿಗಳು ತಜ್ಞರ ಅಭಿಪ್ರಾಯ ಪಡೆದು ಮಾರ್ಗಸೂಚಿ ಮಾಡಿದ್ದಾರೆ. ತಜ್ಞರ ಅಭಿಪ್ರಾಯ ಪಡೆದು ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.
ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದಷ್ಟು ನಿಗಮ-ಮಂಡಳಿಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಕೆಲಸವನ್ನು ಮುಂದಿನ ವಾರ ಮಾಡುತ್ತೇವೆ ಎಂದರು.