Advertisement
ಜಿಲ್ಲಾ ಪಂಚಾಯತ್ ನೀಡಿದ ಭರವಸೆ ಯಂತೆ ಕೊಳವೆಬಾವಿ ಮತ್ತು ಟ್ಯಾಂಕ್ ನಿರ್ಮಿಸಿದ್ದರೆ ಜನರಿಗೆ ಅನುಕೂಲವಾಗು ತ್ತಿತ್ತು. ಅದಾಗದ್ದರಿಂದ ಈ ಭಾಗದ ಜನತೆ ನೀರಿಗಾಗಿ ಅಲೆದಾಟ ಆರಂಭಿಸಿದ್ದಾರೆ. ಬುಡೇರಿಯಾ ಪಜ್ಜಡ್ಕದ ಜನತೆ ಇದುವರೆಗೆ ಆಶ್ರಯಿಸಿದ್ದ ಕುಮಾರಧಾರ ನದಿಯ ಕಿರುತೋಡು ಬತ್ತಿಹೋಗಿದೆ. ಹನಿ ನೀರಿ ಗಾಗಿ ಹೊಗೆಯಲ್ಲಿ ಗುಂಡಿ ತೋಡಿ ನೀರಿನ ಮೂಲವನ್ನು ಹುಡುಕಲಾಗುತ್ತಿದೆ. ಕಳೆದ ವರ್ಷದಿಂದ ಈ ಭಾಗದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕೊಳವೆಬಾವಿ ಮತ್ತು ಟ್ಯಾಂಕ್ ನಿರ್ಮಾಣವಾಗುತ್ತದೆ ಎಂಬ ಭರವಸೆ ಜನಪ್ರತಿನಿಧಿಗಳಿಂದ ಸಿಕ್ಕಿತ್ತು. ಆದರೆ ಈ ಭರವಸೆ ಇನ್ನೂ ಈಡೇರಿಲ್ಲ. ಇದೀಗ ನೀರಿಗಾಗಿ ಕುಮಾರಧಾರ ಕಿರು ನದಿಯ ಉದ್ದಗಲಕ್ಕೂ ಜೆಸಿಬಿ ಯಂತ್ರದ ಮೂಲಕ ಗುಂಡಿಯನ್ನು ತೋಡಲಾಗುತ್ತಿದೆ. ಮತ್ತೆ ಕೆಲವರು ಮಾನವ ಶಕ್ತಿಯನ್ನು ಬಳಸಿ ಗುಂಡಿ ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಸಿಲ ಧಗೆಗೆ ಸಿಕ್ಕಿದ ನೀರೂ ಬತ್ತಿ ಹೋಗುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಕಳೆದ ವರ್ಷವೇ ಈ ಭಾಗದ ಜನತೆಗೆ ಕುಡಿಯುವ ನೀರಿಗಾಗಿ ಪೈಪ್ ಲೈನ್ ಮಾಡಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸ್ಥಳೀಯಾಡಳಿತ ಭರವಸೆ ನೀಡಿತ್ತು. ಆದರೆ ಅದೂ ಜಾರಿಯಾಗಿಲ್ಲ. ಕುಮಾರಧಾರಾ ನದಿಯ ಉಪ ನದಿಯಾದ ಕಿರು ತೋಡು ಜೀವ ಈ ಭಾಗಕ್ಕೆ ಜೀವನದಿ. ಇದುವರೆಗೆ ಎಪ್ರಿಲ್ ಅಂತ್ಯಕ್ಕೆ ನೀರಿಗಾಗಿ ತೋಡಿನಲ್ಲಿ ಗುಂಡಿ ತೋಡಲಾಗುತ್ತಿತ್ತು. ಈ ಬಾರಿ ಮಾತ್ರ ಮಾರ್ಚ್ ಆರಂಭಕ್ಕೆ ನೀರಿಗೆ ಕೊರತೆ ಎದುರಾಗಿದೆ. ಈ ಭಾಗದ ಜನರು ಅಲ್ಲಲ್ಲಿ ಗುಂಡಿ ತೋಡಿ ಕೃಷಿ ಕೆಲಸಗಳಿಗೂ ಬಳಸುತ್ತಿದ್ದರು. ಈಗ ಕೃಷಿಯೂ ಇಲ್ಲ, ಕುಡಿಯಲು ನೀರೂ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಅಡಿಕೆ ತೆಂಗು ಕೃಷಿ ತೋಟವೂ ನೀರಿಲ್ಲದೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ.
Related Articles
ಕಿರು ತೋಡಿನ ಗುಂಡಿಯನ್ನು ಒಮ್ಮೆ ದುರಸ್ತಿ ಮಾಡಿದರೆ ಮತ್ತೆ ಇದರ ನೀರು ಉಪಯೋಗಿಸಲು ಕಡಿಮೆ ಪಕ್ಷ 5 ದಿನವಾದರೂ ಬೇಕು. ಇದೀಗ ನೀರು ಕಡಿಮೆಯಿದ್ದು ಮಣ್ಣು ಮಿಶ್ರಿತವಾಗಿರುತ್ತದೆ. ಹಾಗಾಗಿ ತಿಳಿಯಾಗಲು ಬಹುದಿನ ಬೇಕು. ಇಂತಹ ಸಂದರ್ಭದಲ್ಲಿ ಕಾಲನಿಯ ಜನ ತರಲು ಸುಮಾರು 2 ಕಿಲೋ ಮೀಟರ್ ದೂರದ ಕುಮಾರಧಾರಾ ನದಿಗೆ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ ಬಾವಿ ಕೊರೆಯಲು ಆರಂಭಿಸಿದ್ದಾರೆ. ಆದರೆ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ ಎಂಬುದು ಅವರ ಕೊರಗು.
Advertisement
ಬುಡೇರಿಯಾ ಸುತ್ತಮುತ್ತಲಿನ ಗ್ರಾಮದ ಜನರು ಕುಡಿಯುವ ನೀರಿಗೆ ಕಳೆದ ವರ್ಷವೂ ಸಮಸ್ಯೆ ಎದುರಿಸಿದ್ದರು. ಆಗ ಜನಪ್ರತಿನಿಧಿಗಳು ಶಾಶ್ವತ ನೀರಿನ ಯೋಜನೆಯ ಕನಸು ಬಿತ್ತಿದ್ದರು. ಅದಿನ್ನೂ ಈಡೇರದ ಕಾರಣ ಈ ವರ್ಷವೂ ಬೇಸಗೆಯಲ್ಲಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ.
ತುರ್ತು ಕಾಮಗಾರಿಗೆ ಅನುದಾನಬುಡೇರಿಯಾದಲ್ಲಿ ನೀರಿನ ಸಮಸ್ಯೆ ತಲೆದೋರಿರುವುದು ಗಮನಕ್ಕೆ ಬಂದಿದೆ. ಇಲ್ಲಿ ಶಾಶ್ವತ ನೀರಿನ ಯೋಜನೆಗೆ 10 ಲಕ್ಷ ರೂ.ಗಳ ಅನುದಾನ ಬೇಕು. ಈ ವರ್ಷ ಜಿ.ಪಂ. ನಿಂದ ಅಸಾಧ್ಯ. ತುರ್ತು ವ್ಯವಸ್ಥೆಗಾಗಿ 1 ಲಕ್ಷ ರೂ. ನೀಡಬಹುದು. ಇಲ್ಲಿ ನೀರಿನ ಸಮಸ್ಯೆಯ ಬಗ್ಗೆ ಮುಂದಿನ ಜಿ.ಪಂ. ಅಭಿವೃದ್ಧಿ ಕಾರ್ಯಗಳ ಅವಲೋಕನ ಸಭೆಯಲ್ಲಿ ಚರ್ಚಿಸಿ ಶಾಶ್ವತ ನೀರಿನ ಯೋಜನೆಯನ್ನು ಶೀಘ್ರವೇ ಅನುಷ್ಠಾನ ಮಾಡಲಾಗುವುದು.
– ಪ್ರಮೀಳಾ ಜನಾರ್ದನ್,
ಜಿ.ಪಂ.ಸದಸ್ಯೆ – ಸದಾನಂದ ಆಲಂಕಾರು