Advertisement

ರುಚಿ, ರುಚಿ ಬಿಸಿಬೇಳೆ ಬಾತ್…ಸಿಂಪಲ್ ರೆಸಿಪಿ..ಮನೆಯಲ್ಲೇ ಟ್ರೈ ಮಾಡಿ…

05:41 PM Sep 23, 2022 | ಶ್ರೀರಾಮ್ ನಾಯಕ್ |

ಕರ್ನಾಟಕದ ಜನಪ್ರಿಯವಾದ ಆಹಾರಗಳಲ್ಲಿ ಬಿಸಿ ಬೇಳೆ ಬಾತ್‌ ಕೂಡಾ ಒಂದು. ಕೆಲವರಿಗಂತೂ ಬಿಸಿಬೇಳೆ ಬಾತ್‌ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತೆ. ಇದು ಬೆಳಗ್ಗಿನ ಉಪಹಾರಕ್ಕೂ ಸೈ ಹಾಗೆಯೇ ಮಧ್ಯಾಹ್ನದ ಊಟಕ್ಕೂ ಸೈ, ಜೊತೆಗೆ ಮನೆಗೆ ಬಂದ ಅತಿಥಿಗಳಿಗೂ ಬಿಸಿ ಬಿಸಿಯಾದ ಬಿಸಿ ಬೇಳೆ ಬಾತ್‌ ಮಾಡಿ ಉಣ ಬಡಿಸಬಹುದು. ಅಲ್ಲದೇ ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು. ಈ ರೆಸಿಪಿ ತುಂಬಾನೇ ಸಿಂಪಲ್‌ ಕೂಡ ಆಗಿದ್ದು, ಇದನ್ನು ನೀವು ಮನೆಯಲ್ಲಿ ಟ್ರೈ ಮಾಡಬಹುದು…

Advertisement

ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ 1ಕಪ್‌, ತೊಗರಿಬೇಳೆ 100ಗ್ರಾಂ, ಹುಣಸೇ ಹುಳಿ ರಸ 2ಚಮಚ, ಎಣ್ಣೆ 4 ಚಮಚ, ಕಡ್ಲೆ(ಶೇಂಗಾ) 3 ಚಮಚ, ಸಾಸಿವೆ ಸ್ವಲ್ಪ, ಅಚ್ಚ ಖಾರದ ಪುಡಿ 2ಚಮಚ, ಅರಶಿನ ಪುಡಿ ಸ್ವಲ್ಪ, ಟೊಮೆಟೋ 2, ಬಟಾಟೆ 1,ಬಿಸಿ ಬೇಳೆ ಬಾತ್‌ ಮಸಾಲ ಪುಡಿ 4 ದೊಡ್ಡ ಚಮಚ, ಈರುಳ್ಳಿ 1, ಒಣಮೆಣಸು 3,ಕರಿಬೇವು ಸ್ವಲ್ಪ, ತುಪ್ಪ 1ಚಮಚ, ದೊಣ್ಣೆ ಮೆಣಸು(ಕ್ಯಾಪ್ಸಿಕಂ) 1,ರುಚಿಗೆ ತಕ್ಕಷ್ಟು ಉಪ್ಪು, ತರಕಾರಿ-ಕ್ಯಾರೆಟ್‌ 1,ಬೀನ್ಸ್‌ 5ರಿಂದ 6,ಹಸಿಬಟಾಣಿ 1/2ಕಪ್‌, ಗೆಡ್ಡೆ ಕೋಸು(ನವಿಲು ಕೋಸು) ಸಣ್ಣದು 1.

ತಯಾರಿಸುವ ವಿಧಾನ
ಒಂದು ಕುಕ್ಕರ್‌ ಪಾತ್ರೆಗೆ ಮೇಲಿರುವ ತರಕಾರಿಯನ್ನು ಹಾಕಿ,ಅದರ ಜೊತೆಗೆ ತೊಳೆದಿಟ್ಟ ಅಕ್ಕಿ ಮತ್ತು ತೊಗರಿಬೇಳೆಯನ್ನು ಹಾಕಿ ಬೇಯಿಸಿರಿ(ಜಾಸ್ತಿ ಬೇಯಿಸುವುದು ಬೇಡ). ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದಮೇಲೆ ಸಾಸಿವೆ, ಶೇಂಗಾ, ಈರುಳ್ಳಿ, ಒಣಮೆಣಸು, ದೊಣ್ಣೆಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ. ನಂತರ ಟೊಮೆಟೋ ಹಾಕಿ ಅದಕ್ಕೆ ಅರಶಿನ ಪುಡಿ, ಅಚ್ಚ ಖಾರದ ಪುಡಿ, ಬಿಸಿಬೇಳೆ ಬಾತ್‌ ಮಸಾಲ ಪುಡಿ,ಹುಣಸೇ ಹುಳಿ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ನಂತರ ಒಂದು ಕಪ್‌ ನೀರನ್ನು ಸೇರಿಸಿ ಅದಕ್ಕೆ ಬೇಯಿಸಿಟ್ಟ ತರಕಾರಿಯನ್ನು ಹಾಕಿ ಒಂದು ಚಮಚದಷ್ಟು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿರಿ. ಬಿಸಿ-ಬಿಸಿಯಾದ ಬಿಸಿಬೇಳೆ ಬಾತ್‌ ಖಾರ ಬೂಂದಿಯೊಂದಿಗೆ ಸವಿಯಲು ಸಿದ್ಧ.

*ಶ್ರೀರಾಮ್ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next