Advertisement

ಬಯೋ ಡೀಸೆಲ್‌ ಉತ್ಪಾದನೆಗೆ ಮುಂದಾದ ಗ್ರಾವಿವಿ

03:38 PM Aug 18, 2021 | Team Udayavani |

ಗದಗ: ದೇಶಕ್ಕೆ ಕಾಡುತ್ತಿರುವ ಇಂಧನ ಪೂರೈಕೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಪರ್ಯಾಯ ಇಂಧನದತ್ತ ಹೆಜ್ಜೆ ಇರಿಸಿದೆ. ಜೈವಿಕ ಇಂಧನ ಬಳಕೆಗೆ ಸಾರ್ವಜನಿಕರನ್ನು ಪ್ರೇರೇಪಿಸುವ ಮೂಲಕ ರಾಷ್ಟ್ರೀಯ ಸಮಸ್ಯೆಗೆ ಸರಳ ಪರಿಹಾರ ಸೂಚಿಸುತ್ತಿದೆ.

Advertisement

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಕಚ್ಚಾ ತೈಲದ ಬೇಡಿಕೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದೆ. ಅದರೊಂದಿಗೆ ಇತ್ತೀಚೆಗೆ ಕೋವಿಡ್‌ನಿಂದ ದೇಶದಲ್ಲಿ ಇಂಧನ ಆಮದು ಸುಂಕವೂ ದುಪ್ಪಟ್ಟಾಗಿದೆ. ಪರಿಣಾಮ ಕಳೆದ ಎರಡು ತಿಂಗಳಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 100 ರೂ. ಗಡಿ ದಾಟಿದೆ. ಪರಿಣಾಮ ಸರಕು ಸಾಗಾಣಿಕೆ ವೆಚ್ಚ ಹೆಚ್ಚುತ್ತಿದ್ದು, ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೇರುತ್ತಿವೆ. ಈಗಾಗಲೇ ನೆರೆ-ಕೊರೊನಾದಿಂದ ಕಂಗೆಟ್ಟಿರುವ ಜನಸಾಮಾನ್ಯರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಇಂಧನ ಸ್ವಾವಲಂಬನೆಗೆ ಪ್ರೇರಣೆ: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಆರಂಭಿಸಿದೆ. ಕಳೆದ ಐದಾರು ದಿನಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರದಲ್ಲಿ ಸಿಮರುಬಾ, ಹೊಂಗೆ, ಬೇವು, ಜಟ್ರೋಫ ಬೀಜಗಳಿಂದ ಬಯೋ ಡೀಸೆಲ್‌ ಉತ್ಪಾದನೆಗೆ ಉದ್ದೇಶಿಸಿದೆ. ಸದ್ಯಕ್ಕೆ ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಸಿಮರುಬಾ ಬೀಜಗಳನ್ನು ಸಂಗ್ರಹಿಸುತ್ತಿದ್ದು, ಅವುಗಳಿಂದ ಜೈವಿಕ ಇಂಧನ ತಯಾರಿಕೆ ಮತ್ತು ಸಂಶೋಧನೆಯಲ್ಲಿ ತೊಡಗಿದೆ.

ಇದನ್ನೂ ಓದಿ:ಸರಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಿ : ಅಧಿಕಾರಿಗಳಿಗೆ ಸಚಿವೆ ಜೊಲ್ಲೆ ಸೂಚನೆ

ನಿಗಮದ ಸಂಸ್ಕರಣಾ ಘಟಕದಲ್ಲಿ ಸಿಮರುಬಾ ಬೀಜಗಳನ್ನು ರುಬ್ಬಿ ಎಣ್ಣೆ ತೆಗೆಯಲಾಗುತ್ತದೆ. ಬಳಿಕ ಮಿಥೆನಾಲ್‌ ರಾಸಾಯನಿಕ ಮಿಶ್ರಣವನ್ನು ವಿವಿಧ ಯಂತ್ರೋಪಕರಣಗಳಲ್ಲಿ ಸಂಸ್ಕರಿಸಿ ಅದನ್ನು ಬಯೋ ಡೀಸೆಲ್‌ ಆಗಿ ಪರಿವರ್ತಿಸಲಾಗುತ್ತಿದೆ. ನಾಲ್ಕು ಕೆಜಿ ಸಿಮರುಬಾ ಬೀಜಗಳನ್ನು ರುಬ್ಬಿದರೆ 1 ಲೀಟರ್‌ ಡೀಸೆಲ್‌ ದೊರೆಯಲಿದ್ದು, ಅದರ ತ್ಯಾಜ್ಯ ಬಹುಪಯೋಗಿಯಾಗಿ ಬಳಸಬಹುದು. ಮುಂಬರುವ ದಿನಗಳಲ್ಲಿ ಜೆಟ್ರೋಫ (ಕಾಡುಔಡಲ), ಹೊಂಗೆ, ಬೇವಿನ ಬೀಜಗಳಿಂದಲೂ ಜೈವಿಕ ಇಂಧನ ತಯಾರಿಸಬಹುದು. ಜತೆಗೆ ಅವುಗಳ ಹಿಂಡಿಯನ್ನು ಕೃಷಿ ಭೂಮಿಯಲ್ಲಿ ಪೋಷಕಾಂಶವನ್ನಾಗಿ ಬಳಸಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಅದರಿಂದ ಸುಮಾರು 200 ಎಂಎಲ್‌ ಗ್ಲಿಸರಿನ್‌ ಅನ್ನು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜತೆಗೆ ಅದನ್ನು ಸ್ವತ್ಛಗೊಳಿಸಿದ ತ್ಯಾಜ್ಯ ನೀರಿನಿಂದ ಪಿನಾಯಿಲ್‌ ತಯಾರಿಸಬಹುದಾಗಿದ್ದು, ಜೈವಿಕ ಇಂಧನ ಜತೆಗೆ ಉಪ ಉತ್ಪನ್ನಗಳಿಗೂಮಾರುಕಟ್ಟೆ ಯಲ್ಲಿ ಉತ್ತಮ ಬೆಲೆಯಿದೆ ಎನ್ನುತ್ತಾರೆ ಜೈವಿಕ ಇಂಧನ ಘಟಕದ ಸಂಯೋಜಕ ರವಿ ಜಡಿ.

Advertisement

ಗ್ರಾಮೀಣರಿಗೆ ಉದ್ಯೋಗ ಸೃಷ್ಟಿ: ಜೈವಿಕ ಇಂಧನಕ್ಕೆ ಬೇಕಾಗುವ ಹೊಂಗೆ, ಸಿಮರುಬಾ, ಬೇವು ಬೆಳೆಗೆ ಬಯಲು ಸೀಮೆಯಾದ ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಭೂಮಿಗಳು ಪ್ರಶಸ್ತವಾಗಿವೆ.ಈಗಾಗಲೇ ಕೋವಿಡ್‌ ಮತ್ತಿತರೆ ಕಾರಣಗಳಿಂದ ಈ ಭಾಗದ ಜನರು ಸ್ವಗ್ರಾಮಗಳಿಗೆ ಮರಳಿದ್ದಾರೆ. ತಮ್ಮ ಜಮೀನುಗಳಲ್ಲಿ ಈ ರೀತಿಯ ಬೆಳೆ ಬೆಳೆಯುವುದು, ಎಣ್ಣೆ ಬೀಜಗಳನ್ನು ಆರಿಸುವುದು, ಅವುಗಳ ಸಾಗಾಣಿಕೆ ಮತ್ತಿತರೆ ರೀತಿಯಲ್ಲಿ ಪರೋಕ್ಷವಾಗಿ ಅನೇಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎನ್ನುತ್ತಾರೆ ಗ್ರಾವಿವಿ ಪ್ರಾಧ್ಯಾಪಕರು.

ಸದ್ಯಕ್ಕೆ ಸಿಮರುಬಾ ಬೀಜಗಳಿಂದ ಬಯೋ ಡಿಸೇಲ್‌ ತಯಾರಿಸಲಾಗುತ್ತಿದ್ದು, ಅವುಗಳನ್ನು ಗ್ರಾವಿವಿ ವಾಹನಗಳಿಗೆ ಇತರೆ ಇಂಧನದ ಜತೆಗೆ ಶೇ.20 ಜೈವಿಕ ಇಂಧನ ಬಳಸುತ್ತಿದ್ದೇವೆ. ಜೈವಿಕ ಇಂಧನದಿಂದ ಮೈಲೇಜ್‌ ಹಾಗೂ ಎಂಜಿನ್‌ ಬಾಳಿಕೆ ಬಗ್ಗೆ ಇನ್ನಷ್ಟೇ ಸಂಶೋಧನೆ ನಡೆಯಬೇಕಿದೆ.
-ರವಿ ಜಡಿ, ಜೈವಿಕ ಇಂಧನ ಘಟಕದ
ಸಂಯೋಜಕರು

ಬಯೋ ಡೀಸೆಲ್‌ ಎಂಬುದು ಬಹೋಪಯೋಗಿಯಾಗಿದೆ. ಅದರ ಬಳಕೆ ಕುರಿತು ಸಾರ್ವಜನಿಕರಲ್ಲಿ ವೈಜ್ಞಾನಿಕವಾಗಿ ತಿಳಿವಳಿಕೆ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಕಾರ್ಯಕ್ರಮ ರೂಪಿಸಿದೆ.
-ಪ್ರೊ|ವಿಷ್ಣುಕಾಂತ ಎಸ್‌.ಚಟಪಲ್ಲಿ,
ಗ್ರಾವಿವಿ ಕುಲಪತಿ

-ವೀರೇಂದ್ರ ನಾಗಲದಿನಿ

Advertisement

Udayavani is now on Telegram. Click here to join our channel and stay updated with the latest news.

Next