ಪಾಟ್ನಾ:“ಬಿಹಾರ ವಿಧಾನಸಭೆಗೆ 2025ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ನೇತೃತ್ವ ವಹಿಸಲಿದ್ದಾರೆ’- ಹೀಗೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಸುಳಿವು ನೀಡಿದ್ದಾರೆ.
ಈ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ನೇತೃತ್ವ ವಹಿಸುವುದಿಲ್ಲ ಎಂದು ನಿತೀಶ್ ಹೇಳಿದ್ದಾರೆ. ಇದರ ಜತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಒಕ್ಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಶಾಸಕಾಂಗ ಸಭೆಯಲ್ಲಿ ನಿತೀಶ್ ಅವರು ಈ ಅಂಶಗಳನ್ನು ಮಂಡಿಸಿದ್ದಾರೆ.
“ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳೆಲ್ಲವೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ’ ಎಂದು ಹೇಳಿದ್ದಾರೆ ಬಿಹಾರ ಸಿಎಂ.
ನಿತೀಶ್ ಕುಮಾರ್ ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವುದಿದ್ದರೆ ಅವರಿಗೆ ನೈತಿಕ ಧೈರ್ಯ ಬೇಕು. ಒಂದು ವೇಳೆ ಅವರು ಹಾಗೆ ಮಾಡಿದ್ದೇ ಆದರೆ, ಜೆಡಿಯುನಲ್ಲಿ ದಂಗೆ ಉಂಟಾಗಲಿದೆ. ಈಗಾಗಲೇ ತೇಜಸ್ವಿ ಯಾದವ್ ಕಾರ್ಯ ವೈಖರಿಯಿಂದ ಜೆಡಿಯು ಮುಖಂಡರು ಬೇಸತ್ತಿದ್ದಾರೆ.
-ನಿತಿನ್ ನಬಿನ್, ಬಿಜೆಪಿ ಶಾಸಕ