Advertisement

ಮಸೂದ್ ಅಜ್ಹರ್ ನನ್ನು ಕಪ್ಪುಪಟ್ಟಿಗೆ ಸೇರಿಸಲು ತ್ರಿರಾಷ್ಟ್ರಗಳ ಬೆಂಬಲ

02:55 AM Feb 28, 2019 | Karthik A |

ವಿಶ್ವಸಂಸ್ಥೆ: ಜೈಶ್-ಎ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜ್ಹರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮಹತ್ವದ ರಾಜತಾಂತ್ರಿಕ ಯಶಸ್ಸು ಲಭ್ಯವಾಗಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಈ ಪ್ರಯತ್ನವನ್ನು ವಿಶ್ವದ ದೈತ್ಯ ರಾಷ್ಟ್ರಗಳಾಗಿರುವ ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲಂಡ್ ಬೆಂಬಲಿಸಿವೆ. ಆದರೆ ಭಾರತದ ನೆರೆ ರಾಷ್ಟ್ರ ಚೀನಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಕಾದು ನೋಡುವ ತಂತ್ರ ಅನುಸರಿಸಿದೆ. ಈ ಹಿಂದೆ ಜೈಶ್ ಮುಖ್ಯಸ್ಥನನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಎರಡೆರಡು ಬಾರಿ ಅಡ್ಡಗಾಲು ಹಾಕಿತ್ತು. ಇದೀಗ ಭಾರತದ ಈ ಹೊಸ ಪ್ರಸ್ತಾವನೆಗೆ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Advertisement

ಉಗ್ರ ಮಸೂದ್ ಅಜ್ಹರ್ ಗೆ ಶಸ್ತ್ರಾಸ್ತ್ರ ನಿಷೇಧ, ಜಾಗತಿಕ ಸಂಚಾರ ನಿಷೇಧ ಮತ್ತು ಈತನ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುವ ವಿಚಾರವನ್ನು ಪರಿಗಣಿಸುವಂತೆ 15 ಸದಸ್ಯ ರಾಷ್ಟ್ರಗಳನ್ನೊಳಗೊಂಡಿರುವ ಭದ್ರತಾ ಮಂಡಳಿಯ ಮಂಜೂರು ಆಯೋಗಕ್ಕೆ ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ 2017ರಲ್ಲಿ ಅಜ್ಹರ್ ನನ್ನು ಜಾಗತಿಕ ಉಗ್ರನೆಂದು ಗುರುತಿಸಲು ಈ ಆಯೋಗವು ಪರಿಗಣಿಸಬೇಕಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಮುಂದಿಟ್ಟುಕೊಂಡು ಚಿನಾವು ಕ್ಯಾತೆ ತೆಗೆದಿತ್ತು. ಇದರಿಂದಾಗಿ ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಮತ್ತು ಆ ಮೂಲಕ ಪಾಕಿಸ್ಥಾನಕ್ಕೆ ವಿಶ್ವಮಟ್ಟದಲ್ಲಿ ಮುಖಭಂಗ ಮಾಡುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಈ ಬಾರಿಯಾದರೂ ವಿಶ್ವಸಂಸ್ಥೆಯಲ್ಲಿ ಚೀನಾದ ನಿಲುವು ಬದಲಾಗುತ್ತದೆಯೋ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next