ಹೊಸದಿಲ್ಲಿ: ಲಡಾಖ್ ಬಳಿಯಿರುವ ಭಾರತ -ಚೀನ ಗಡಿ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಭೂಭಾಗಗಳನ್ನು ಅತಿಕ್ರಮಿಸಲು ಅನೇಕ ಬಾರಿ ಪ್ರಯತ್ನಿಸಿ ಮಣ್ಣುಮುಕ್ಕಿರುವ ಚೀನ, ಭಾರತದ ಮೇಲೆ ದೊಡ್ಡ ಮಟ್ಟದ ಆಕ್ರಮಣ ನಡೆಸಬಹುದು ಎಂಬ ಅಭಿಪ್ರಾಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿವೆ.
ಜೂನ್‌ನಲ್ಲಿ ಗಾಲ್ವಾನ್‌ನಲ್ಲಿ, ಭಾರತೀಯ ಯೋಧರ ಮೇಲೆ ಚೀನ ಸೈನಿಕರು ಹಠಾತ್ ದಾಳಿ ನಡೆಸಿದ್ದರು. ಆಗ, 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದು ಭಾರತೀಯ ಯೋಧರು ನೀಡಿದ ತಿರುಗೇಟಿಗೆ 60ಕ್ಕೂ ಹೆಚ್ಚು ಚೀನ ಯೋಧರು ಅಸುನೀಗಿದ್ದರು. ಇತ್ತೀಚೆಗೆ, ಸೆ.8ರಂದು ಲಡಾಖ್‌ನ ಪಾಂಗಾಂಗ್ ಸರೋವರದ ಫಿಂಗರ್ 3 ಪ್ರಾಂತ್ಯದಲ್ಲಿ ಚೀನ ಸೈನಿಕರು, ಭಾರತಕ್ಕೆ ಸೇರಿದ ಕೆಲ ಪ್ರದೇಶಗಳನ್ನು ಆಕ್ರಮಿಸಲು 2 ಬಾರಿ ಯತ್ನಿಸಿದ್ದಾಗ ಭಾರತೀಯ ಯೋಧರು ಅವರನ್ನು ಹಿಮ್ಮೆಟ್ಟಿಸಿದ್ದರು.
ಇಂಥ ಸತತ ಹಿನ್ನಡೆಗಳು ಚೀನ ಸೇನೆಯ ಈ ವೈಫಲ್ಯಗಳು ಸೇನೆಯ ಮುಖ್ಯಸ್ಥರೂ ಆಗಿರುವ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ತೀವ್ರ ಮುಖಭಂಗ ಉಂಟು ಮಾಡಿವೆೆ. ರಾಜಕೀಯ ವಲಯ ಮಾತ್ರವಲ್ಲ, ಸೇನೆಯೊಳಗೇ ತಾವು ನಗೆಪಾಟಲಿಗೆ ಈಡಾಗಿರುವುದರಿಂದ ಅವರು ಭಾರತದ ಮೇಲೆ ಮತ್ತೂಂದು ಸುತ್ತಿನ ದಾಳಿ ನಡೆಸಲು ಷಡ್ಯಂತ್ರ ರೂಪಿಸಬಹುದು ಎಂದು “ನ್ಯೂಸ್‌ವೀಕ್’ನಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ ಗಾರ್ಡನ್ ಜಿ. ಚಾಂಗ್ ಎಂಬ ತಜ್ಞರು ಅಂದಾಜಿಸಿದ್ದಾರೆ.
ರಾಜತಾಂತ್ರಿಕ ಷಡ್ಯಂತ್ರ: ಮತ್ತೂಂದೆಡೆ, ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್‌ಐ) ಯೋಜನೆಯ ಸುಗಮ ಅನುಷ್ಠಾನಕ್ಕಾಗಿ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತನ್ನ ರಾಯಭಾರಿಗಳನ್ನು ಚೀನ ಬದಲಿಸಲು ಕ್ರಮ ಕೈಗೊಂಡಿದೆ. ಜಿನ್‌ಪಿಂಗ್ ಅವರ ಆಪ್ತರನ್ನೇ ರಾಯಭಾರಿಗಳನ್ನಾಗಿಸಿ ಬಿಆರ್‌ಐ ಯೋಜನೆಗೆ ಆ ರಾಷ್ಟ್ರಗಳು ಅನುವು ಮಾಡಿಕೊಡಲು ಬೇಕಾದ ಲಾಬಿಗಳನ್ನು ನಡೆಸಲು ಚೀನ ತಂತ್ರಗಾರಿಕೆ ರೂಪಿಸಿದೆ. ಈ ಯೋಜನೆ ವಿರೋಧಿಸಿರುವ ಭಾರತವನ್ನು ಈ ವಿಚಾರದಲ್ಲಿ ಏಕಾಂಗಿಯಾಗಿಸಲು ಈ ಪ್ರಯತ್ನಕ್ಕೆ ಚೀನ ಕೈ ಹಾಕಿದೆ.
ಚೀನದಿಂದ ಒಎಫ್ ಕೇಬಲ್ ಅಳವಡಿಕೆ: ಭಾರತ-ಚೀನ ನೈಜ ಗಡಿ ರೇಖೆ ಬಳಿಯಿರುವ ಪಾಂಗಾಂಗ್ ಸರೋವರದ ದಕ್ಷಿಣ ಭಾಗದಲ್ಲಿ ಚೀನ ಸರಕಾರ, ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಹಾಕಲು ಸಿದ್ಧತೆ ನಡೆಸಿದೆ ಎಂದು ಭಾರತ ಹೇಳಿದೆ. ಗಡಿ ರೇಖೆಯ ಸಮೀಪದಲ್ಲಿರುವ ಚೀನ ಸೇನೆ, ಗಡಿ ರೇಖೆಗಿಂತ ತುಂಬಾ ಹಿಂದೆ ಇರುವ ತನ್ನ ಸೇನಾ ನೆಲೆಗಳಿಗೆ ತ್ವರಿತವಾಗಿ ಸಂದೇಶಗಳನ್ನು ರವಾನಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕೇಬಲ್‌ಗಳನ್ನು ಹಾಕುತ್ತಿದೆ ಎಂದಿದೆ.