Advertisement

ಪೊಂಗಲ್‌ಗೆ ಭೋಪರಾಕ್‌!

04:38 PM Jan 10, 2018 | |

ಸಂಕ್ರಾಂತಿ ಹಬ್ಬ ಅಂದಾಕ್ಷಣ, ಎಳ್ಳು-ಬೆಲ್ಲದ ಜೊತೆಜೊತೆಗೇ ನೆನಪಾಗುವುದು ಪೊಂಗಲ್‌. ಸಿಹಿ, ಖಾರ ಹೀಗೆ ಎರಡು ಬಗೆಯಲ್ಲಿ ನಮ್ಮ ಜಿಹ್ವಾ ಚಾಪಲ್ಯವನ್ನು ತಣಿಸುವ ಖಾದ್ಯ ಅದು. ಪೊಂಗಲ್‌ ಬಾಯಿಗಷ್ಟೇ ಅಲ್ಲ, ಉದರಕ್ಕೂ ಸಿಹಿ. ಪ್ರತಿ ಸಂಕ್ರಾಂತಿಗೂ ಒಂದೇ ಬಗೆಯ ಪೊಂಗಲ್‌ ಮಾಡಿ ಬೇಸರವಾಗಿದ್ದರೆ, ಈ ಬಾರಿ ಹೊಸರುಚಿಯನ್ನು ಟ್ರೈ ಮಾಡಬಹುದು. 
  
1.ನವಣೆಯ ಸಿಹಿ ಪೊಂಗಲ್‌
ಬೇಕಾಗುವ ಸಾಮಗ್ರಿ: ಹೆಸರು ಬೇಳೆ ಅರ್ಧ ಕಪ್‌, ನವಣೆ ಅರ್ಧ ಕಪ್‌, ಹಾಲು ಅರ್ಧ ಲೀಟರ್‌(ಎರಡು ಕಪ್‌), ತುಪ್ಪ ಅರ್ಧ ಕಪ್‌, ಏಲಕ್ಕಿ ಪುಡಿ ಅರ್ಧ ಚಮಚ, ಗೋಡಂಬಿ, ದ್ರಾಕ್ಷಿ  ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ಮುಕ್ಕಾಲು ಕಪ್‌,
ಒಣಕೊಬ್ಬರಿ ತುರಿ ಅರ್ಧ ಕಪ್‌, ನೀರು ಮೂರು ಕಪ್‌.

Advertisement

ಮಾಡುವ ವಿಧಾನ: ಬಾಣಲೆಯಲ್ಲಿ ಒಂದು ಟೀ ಚಮಚ ತುಪ್ಪವನ್ನು ಹಾಕಿ ಹೆಸರು ಬೇಳೆಯನ್ನು ಪರಿಮಳ ಬರುವವರೆಗೆ ಹುರಿದು ಕೊಳ್ಳಿ. ಕುಕ್ಕರ್‌ನಲ್ಲಿ ನವಣೆ ಮತ್ತು ಹೆಸರು ಬೇಳೆಯನ್ನು  ಹಾಕಿ ನೀರು ಮತ್ತು ಸ್ವಲ್ಪ ಹಾಲು ಹಾಕಿ ಬೇಯಿಸಿ. 
ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಕರಗಿಸಿಕೊಳ್ಳಿ. ಕರಗಿದ ಪಾಕವನ್ನು ಶೋಧಿಸಿ, ಬೆಂದ ಮಿಶ್ರಣಕ್ಕೆ ಬೆರೆಸಿ ಹಾಲನ್ನು ಹಾಕಿ. ನಂತರ ಹತ್ತು ನಿಮಿಷಗಳ ಕಾಲ ಬೇಯಿಸಿ. ಒಣಕೊಬ್ಬರಿ ತುರಿಯನ್ನು ಸೇರಿಸಿ. ಬೆಂದ ಮಿಶ್ರಣಕ್ಕೆ ತುಪ್ಪ ಸೇರಿಸಿ, ಏಲಕ್ಕಿ ಪುಡಿ ಹಾಕಿ. ನಂತರ ಉಪ್ಪು ಸೇರಿಸಿ. ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಪೊಂಗಲ್‌ಗೆ ಬೆರೆಸಿ. ರುಚಿಯಾದ ಮತ್ತು ಆರೋಗ್ಯಕರವಾದ ನವಣೆ ಪೊಂಗಲ್‌ ಸಿದ್ಧ. 

2.ಅವರೆಕಾಳಿನ ಪೊಂಗಲ್‌
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಅವರೆಕಾಳು ಅರ್ಧ ಕಪ್‌, ಹೆಸರು ಬೇಳೆ ಅರ್ಧ ಕಪ್‌, ಹಾಲು ಎರಡು ಕಪ್‌ (ಜಾಸ್ತಿ ಹಾಲು ಹಾಕಿದಷ್ಟೂ ರುಚಿ ಜಾಸ್ತಿ), ಅಕ್ಕಿ ಅರ್ಧ ಕಪ್‌, ಬೆಲ್ಲದ ಪುಡಿ ಒಂದು ಕಪ್‌(ಸಿಹಿ ಎಷ್ಟು ಬೇಕೋ ಅಷ್ಟು) ಒಣ ಕೊಬ್ಬರಿ ಅರ್ಧ ಕಪ್‌, ಗೋಡಂಬಿ, ದ್ರಾಕ್ಷಿ, ಖರ್ಜೂರ ಸ್ವಲ್ಪ, ತುಪ್ಪ ಒಂದು ಕಪ್‌, ಏಲಕ್ಕಿ ಪುಡಿ ಅರ್ಧ ಚಮಚ, ಚಿಟಿಕೆ ಉಪ್ಪು.

ಮಾಡುವ ವಿಧಾನ: ಹಸಿ ವಾಸನೆ ಹೋಗುವವರೆಗೆ ಅಕ್ಕಿ ಮತ್ತು ಹೆಸರು ಬೇಳೆಯನ್ನು ಹುರಿದುಕೊಳ್ಳಿ. ಒಂದು ಕುಕ್ಕರ್‌ನಲ್ಲಿ ಎರಡು ಟೀ ಚಮಚ ತುಪ್ಪ ಹಾಕಿ ಅಕ್ಕಿ, ಹೆಸರುಬೇಳೆ, ಅವರೆಕಾಳನ್ನು ಹಾಕಿ. ನಂತರ ಹಾಲು, ಮೂರು ಕಪ್‌ ನೀರು, ಒಣಕೊಬ್ಬರಿ, ಉಪ್ಪು ಹಾಕಿ ನಾಲ್ಕು ಅಥವಾ ಐದು ವಿಷಲ್‌ ಕೂಗಿಸಿ. ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ಒಂದು ಕಪ್‌ ನೀರು ಹಾಕಿ ಕರಗಿಸಿಕೊಳ್ಳಿ. ಕರಗಿದ ಬೆಲ್ಲವನ್ನು ಶೋಧಿಸಿ, ಬೇಯಿಸಿಟ್ಟ ಪದಾರ್ಥಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮಗೆ ಎಷ್ಟು ಗಟ್ಟಿ ಬೇಕೋ ಆ ಹದಕ್ಕೆ ತಕ್ಕಂತೆ  ನೀರು ಅಥವಾ ಹಾಲನ್ನು ಹಾಕಿ. ನಂತರ ಗೋಡಂಬಿ, ದ್ರಾಕ್ಷಿ, ಖರ್ಜೂರವನ್ನು ತುಪ್ಪದಲ್ಲಿ ಹುರಿದು ಪೊಂಗಲ್‌ಗೆ ಸೇರಿಸಿ. 

 3. ಹಾಲಿನ ಪೊಂಗಲ್‌
ಬೇಕಾಗುವ ಸಾಮಗ್ರಿ:
ಅಕ್ಕಿ ಒಂದು ಕಪ್‌, ಹಾಲು ಹತ್ತು ಕಪ್‌, ಏಲಕ್ಕಿ ಪುಡಿ ಕಾಲು ಚಮಚ, ಬೆಲ್ಲದ ಪುಡಿ ಒಂದೂವರೆ ಕಪ್‌, ತುಪ್ಪ 3-4 ಚಮಚ, ಗೋಡಂಬಿ, ದ್ರಾಕ್ಷಿ ಸ್ವಲ್ಪ.

Advertisement

ಮಾಡುವ ವಿಧಾನ:  ಮೊದಲು ಅಕ್ಕಿಯನ್ನು ತೊಳೆದು ಕುಕ್ಕರ್‌ನಲ್ಲಿ ಹಾಲು ಹಾಕಿ ಬೆಯಿಸಿ. ಹೆಸರು ಬೇಳೆಯನ್ನು ಪ್ರತ್ಯೇಕವಾಗಿ ಬೇಯಿಸಿ. ನಂತರ ಎರಡನ್ನೂ ಸೇರಿಸಿ ಜೊತೆಗೆ ಬೆಲ್ಲ ಹಾಕಿ. ಬೆಲ್ಲ ಚೆನ್ನಾಗಿ ಕರಗುವವರೆಗೂ ಕೈಯಾಡಿಸಿ. ಅದಕ್ಕೆ ಗಟ್ಟಿ ಹಾಲನ್ನು ಸೇರಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ, ಏಲಕ್ಕಿ ಪುಡಿ ಸೇರಿಸಿ. ಬಿಸಿಯಾಗಿದ್ದಾಗಲೇ ಸವಿದರೆ ಚೆನ್ನ. 

4 ಸಿಹಿ ಪೊಂಗಲ್‌:
ಬೇಕಾಗುವ ಸಾಮಗ್ರಿ:
ಅಕ್ಕಿ ಒಂದು ಕಪ್‌, ಹೆಸರು ಬೇಳೆ ಕಾಲು ಕಪ್‌, ಬೆಲ್ಲದ ಪುಡಿ ಒಂದೂ ಕಾಲು ಕಪ್‌, ಒಣ ಕೊಬ್ಬರಿ ಅರ್ಧ ಕಪ್‌, ಗೋಡಂಬಿ, ದ್ರಾಕ್ಷಿ, ಚಿಕ್ಕದಾಗಿ ಕತ್ತರಿಸಿದ ಖರ್ಜೂರ ಸ್ವಲ್ಪ. ಏಲಕ್ಕಿ ಪುಡಿ ಕಾಲು ಚಮಚ, ತುಪ್ಪ ಕಾಲು ಕಪ್‌,
ನೀರು ಅರ್ಧ ಕಪ್‌(ಬೆಲ್ಲದ ಪಾಕಕ್ಕೆ)

ಮಾಡುವ ವಿಧಾನ: ಹೆಸರು ಬೇಳೆಯನ್ನು ಕೆಂಬಣ್ಣ ಬರುವವರೆಗೆ ಹುರಿಯಿರಿ. ನಂತರ ತೊಳೆದ ಅಕ್ಕಿ, ಹೆಸರುಬೇಳೆ, ಐದು ಕಪ್‌ ನೀರು ಸೇರಿಸಿ ಕುಕ್ಕರ್‌ನಲ್ಲಿ ಐದಾರು ವಿಷಲ್‌ ಬರುವವರೆಗೆ ಬೇಯಿಸಿ ಬೆಲ್ಲದ ಪಾಕ ತಯಾರಿಸಿಕೊಳ್ಳಿ. ನಂತರ ಬೇಯಿಸಿದ ಪದಾರ್ಥಕ್ಕೆ ಬೆಲ್ಲ ಹಾಗೂ ಒಣ ಕೊಬ್ಬರಿ ಸೇರಿಸಿ. ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕೆದಕುತ್ತಾ ಬೇಯಿಸಿ. ಹುರಿದ ಗೋಡಂಬಿ, ಖರ್ಜೂರ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿದರೆ ಸಿಹಿ ಪೊಂಗಲ್‌ ರೆಡಿ. 

5. ಖಾರ ಪೊಂಗಲ್‌ ಅಥವಾ ಹುಗ್ಗಿ
ಬೇಕಾಗುವ ಸಾಮಗ್ರಿ:
ಅಕ್ಕಿ ಒಂದು ಕಪ್‌, ಹೆಸರು ಬೇಳೆ ಅರ್ಧ ಕಪ್‌, ತುಪ್ಪ ಎರಡು ಚಮಚ, ಕಾಳು ಮೆಣಸಿನ ಪುಡಿ ಒಂದೂವರೆ ಚಮಚ, ಜೀರಿಗೆ ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು ಐದು ಕಪ್‌, ಗೋಡಂಬಿ ಸ್ವಲ್ಪ, ಸಣ್ಣಗೆ ಹೆಚ್ಚಿದ ಹಸಿ ಶುಂಠಿ ಒಂದು ಟೀ ಚಮಚ, ಕರಿಬೇವಿನ ಎಲೆ ಸ್ವಲ್ಪ, ಹಾಲು ಅರ್ಧ ಕಪ್‌.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಎರಡು ಚಮಚ ತುಪ್ಪವನ್ನು ಬಿಸಿ ಮಾಡಿ. ನಂತರ ಜೀರಿಗೆ, ಹಸಿಶುಂಠಿ, ಗೋಡಂಬಿ, ಕಾಳು ಮೆಣಸು, ಕರಿಬೇವಿನ ಸೊಪ್ಪು ಹಾಕಿ ಹುರಿದು ಕೊಳ್ಳಿ. ಅರ್ಧ ಚಮಚ ಕಾಳುಮೆಣಸಿನ ಪುಡಿ ಹಾಕಿ. ಅವುಗಳ ಜೊತೆ ಹೆಸರು ಬೇಳೆ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ತೊಳೆದ ಅಕ್ಕಿಯನ್ನು ಹಾಕಿ (ಅಕ್ಕಿಯನ್ನು ನೆನೆಸುವುದು ಬೇಡ) 
ನಂತರ ಇದಕ್ಕೆ ಉಪ್ಪು ಹಾಗೂ ಅರ್ಧ ಕಪ್‌ ಹಾಲು ಹಾಕಿ, ಮೂರು ವಿಷಲ್‌ ಬರುವವರೆಗೆ ಬೇಯಿಸಿ. ಜೊತೆಗೆ ತೆಂಗಿನ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿಕರ.

ವೇದಾವತಿ ಹೆಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next