“ನಾನು ಯಾವತ್ತೂ ನಟಿಯಾಗುತ್ತೇನೆ ಅಂಥ ಅಂದುಕೊಂಡಿರಲಿಲ್ಲ. ನಮ್ಮ ಮನೆಯಲ್ಲೂ ನಮ್ಮ ಅಪ್ಪ-ಅಮ್ಮನಿಗೆ ನಾನು ಸಿನಿಮಾಕ್ಕೆ ಬರೋದು ಇಷ್ಟವಿರಲಿಲ್ಲ.
ಒಮ್ಮೆ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಖಾಸಗಿ ಚಾನೆಲ್ ಒಂದಕ್ಕೆ ನಿರೂಪಕಿಯಾಗಿ ಆಡಿಷನ್ ಕೊಟ್ಟಿದ್ದೆ. ಅದೇ ಮೊದಲ ಬಾರಿಗೆ ನಾನು ಕ್ಯಾಮೆರಾ ಎದುರಿಸಿದ್ದು. ಕೊನೆಗೆ ಆ ಚಾನೆಲ್‌ನಲ್ಲಿ ನಿರೂಪಕಿಯಾಗಿ ಸೆಲೆಕ್ಟ್ ಆದೆ. ಒಂದೆರಡು ತಿಂಗಳ ನಂತರ ನಿರೂಪಕಿ ಕೆಲಸ ಬೋರ್ ಆಗೋದಕ್ಕೆ ಶುರುವಾಯ್ತು. ಅದೇ ವೇಳೆ ಸಂಕಲನಕಾರ ಕ್ರೇಜಿಮೈಂಡ್ಸ್ ಶ್ರೀ ನನ್ನ ಫೋಟೋವನ್ನು ನಿರ್ದೇಶಕ ಯೋಗರಾಜ್ ಭಟ್‌ಗೆ ಕಳುಹಿಸಿದ್ದರು. ಬಳಿಕ ನನ್ನನ್ನು ನೋಡಿದ ನಿರ್ದೇಶಕ ಯೋಗರಾಜ್ ಭಟ್ “ಗಾಳಿಪಟ’ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿದರು. ಹೀಗೆ ಸಿನಿಮಾ ಜರ್ನಿ ಶುರುವಾಯಿತು’ ಇದು ಸಿನಿಮಾರಂಗಕ್ಕೆ ಮೊದಲು ಕಾಲಿಟ್ಟ ಬಗ್ಗೆ ನಟಿ ಭಾವನಾ ರಾವ್ ಮಾತು.
ಹೌದು, “ಗಾಳಿಪಟ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಭಾವನಾ ರಾವ್, ಇಂದಿಗೂ “ಗಾಳಿಪಟ’ ಹೀರೋಯಿನ್ ಅಂತಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ. “ಗಾಳಿಪಟ’ ಸಿನಿಮಾದ ಬಳಿಕ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ಭಾವನಾ ರಾವ್, ಈಗ ಹಿಂದಿಯಲ್ಲೂ ಒಂದಷ್ಟು ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸುತ್ತಿದ್ದಾರೆ.
ತಮ್ಮ ಆರಂಭದ ದಿನಗಳ ಬಗ್ಗೆ ಮಾತನಾಡುವ ಭಾವನಾ ರಾವ್, “”ಗಾಳಿಪಟ’ ಸಿನಿಮಾದ ಮೊದಲ ದಿನವೇ ನನಗೆ ಅಜ್ಜಿ ಗೆಟಪ್ ಹಾಕಿಸಿದ್ದರು. ಬಾಯಲ್ಲಿ ಪಾನ್ ಬೀಡಾ ಹಾಕಿಕೊಂಡು ಥೇಟ್ ಅಜ್ಜಿಯಂತೆ ಕಾಣುತ್ತಿದೆ. ತುಂಬ ದೊಡ್ಡ ಸ್ಟಾರ್ ಕಾಸ್ಟಿಂಗ್, ದೊಡ್ಡ ಟೆಕ್ನೀಷಿಯನ್ಸ್ ಆ ಸಿನಿಮಾದಲ್ಲಿದ್ದರು. ಆದರೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಟೀಮ್ ನನಗೆ ತುಂಬ ಸಪೋರ್ಟ್ ಮಾಡಿದರು. ಆಗಿನ್ನೂ ನಾನು ತುಂಬ ಚಿಕ್ಕವಳಿದ್ದೆ. ಎಲ್ಲದಕ್ಕೂ ಎಕ್ಸೈಟ್ಮೆಂಟ್ ಇತ್ತು. ತಿಳಿದುಕೊಳ್ಳಲು ಸಾಕಷ್ಟು ವಿಷಯಗಳಿದ್ದವು. ಪ್ರತಿಬಾರಿ ಟೇಕ್ ಆದಾಗಲೂ ನಾನು ಯೋಗರಾಜ್ ಭಟ್ ಹತ್ತಿರ ಹೋಗಿ, “ಸರ್, ನಾನು ಹೇಗೆ ಮಾಡಿದ್ದೇನೆ…?’ ಎಂದು ಪದೇ ಪದೇ ಕೇಳುತ್ತಿದ್ದೆ. ನಾಲ್ಕೈದು ದಿನ ಆದ ನಂತರ ಯೋಗರಾಜ್ ಭಟ್ ಅವರೇ ಕರೆದು ಹೇಳಿದ್ರು. “ನಿನ್ನ ಬಗ್ಗೆ ನಿನಗೆ ಯಾವ ಡೌಟು ಬೇಡ. ತುಂಬ ಚೆನ್ನಾಗಿ ಮಾಡ್ತಿದ್ದೀಯಾ. ಸರಿಯಾಗಿ ಮಾಡದಿದ್ರೆ, ನಾನೇ ಹೇಳುತ್ತೇನೆ’ ಅಂಥ ಇನ್ನಷ್ಟು ಕಾನ್ಫಿಡೆನ್ಸ್ ಕೊಟ್ಟರು’ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಭಾವನಾ.