ಹೊಸದಿಲ್ಲಿ : ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ಸಲಹಾ ಗುಂಪು (TAG) ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ಯನ್ನು ತುರ್ತು ಬಳಕೆಯ ಪಟ್ಟಿ (EUL) ಗೆ ಶಿಫಾರಸು ಮಾಡಿದೆ. ಇದರಿಂದಾಗಿ ಭಾರತದ ಲಸಿಕೆಗೆ ಜಾಗತಿಕ ಮಾನ್ಯತೆ ದೊರಕಿದಂತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಗುಂಪು ಕೋವಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಗೆ ಶಿಫಾರಸು ಮಾಡಿದೆ” ಎಂದು ಮೂಲವೊಂದು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಕ್ಟೋಬರ್ 26 ರಂದು ತಾಂತ್ರಿಕ ಸಲಹಾ ಗುಂಪು “ಅಪಾಯ-ಪ್ರಯೋಜನ ಮೌಲ್ಯಮಾಪನ” ನಡೆಸಲು ಕೋವ್ಯಾಕ್ಸಿನ್ ಕುರಿತು ಕಂಪನಿಯಿಂದ “ಹೆಚ್ಚುವರಿ ಸ್ಪಷ್ಟೀಕರಣಗಳನ್ನು” ಕೋರಿತ್ತು.
TAG-EUL ಒಂದು ಸ್ವತಂತ್ರ ಸಲಹಾ ಗುಂಪಾಗಿದ್ದು, ಇದು ತುರ್ತು ಬಳಕೆಗಾಗಿ ಕೋವಿಡ್ -19 ಲಸಿಕೆಯನ್ನು ಪಟ್ಟಿಗೆ ಸೇರಿಸಬಹುದೇ ಎಂಬುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸುಗಳನ್ನು ಮಾಡುತ್ತದೆ.
ಕೋವಾಕ್ಸಿನ್ ಲಸಿಕೆ ಕೋವಿಡ್ ರೋಗಲಕ್ಷಣದ ವಿರುದ್ಧ 77.8 ಶೇಕಡಾ ಪರಿಣಾಮಕಾರಿತ್ವವನ್ನು ಮತ್ತು ಹೊಸ ಡೆಲ್ಟಾ ರೂಪಾಂತರದ ವಿರುದ್ಧ 65.2 ಶೇಕಡಾ ರಕ್ಷಣೆಯನ್ನು ಪ್ರದರ್ಶಿಸಿದೆ.
ಜೂನ್ ತಿಂಗಳಿನಲ್ಲೇ 3 ಹಂತದ ಪ್ರಯೋಗಗಳಿಂದ ಕೋವಾಕ್ಸಿನ್ ಪರಿಣಾಮಕಾರಿತ್ವದ ಅಂತಿಮ ವಿಶ್ಲೇಷಣೆಯನ್ನು ಮುಕ್ತಾಯಗೊಳಿಸಿದೆ ಎಂದು ಕಂಪನಿ ಹೇಳಿದೆ.
ಭಾರತ್ ಬಯೋಟೆಕ್‌ನ ಕೋವಾಕ್ಸಿನ್ , ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ.