ಅಯೋಧ್ಯೆ: ಶ್ರೀರಾಮಜನ್ಮಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಮೊದಲೇ ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ದತ್ತಾಂಶದ ಪ್ರಕಾರ, 2021ರಲ್ಲಿ ಒಟ್ಟು 3.25 ಲಕ್ಷ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಿದ್ದರು. 2022ರ ವೇಳೆಗೆ ಇದು 85 ಪಟ್ಟು ಹೆಚ್ಚಳವಾಗಿದ್ದು, 2.39 ಕೋಟಿ ಪ್ರವಾಸಿಗರು ಆಗಮಿಸಿದ್ದರು. 2023ರಲ್ಲಿ ಈ ಸಂಖ್ಯೆ 3.5 ಕೋಟಿ ದಾಟುವ ಅಂದಾಜಿದೆ. 2019ಕ್ಕೂ ಮೊದಲು 2ರಿಂದ 3 ಲಕ್ಷ ಯಾತ್ರಿಕರು ಭೇಟಿ ನೀಡುತ್ತಿದ್ದರು.
ಪ್ರವಾಸಿಗರಿಂದ ವ್ಯಾಪಾರ-ವಹಿವಾಟು ಕೂಡ ಗಣನೀಯವಾಗಿ ಏರಿಕೆಯಾಗಿದೆ. ದೇಗುಲದ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ 50,000 ಕೋಟಿ ರೂ.ಗಳಷ್ಟು ವ್ಯಾಪಾರ-ವಹಿವಾಟು ನಡೆಯುವ ಅಂದಾಜಿದೆ.
ಇ-ರಿಕ್ಷಾಗಳಿಗೆ ಭಾರೀ ಬೇಡಿಕೆ: ಪ್ರವಾಸಿಗರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಇ-ರಿಕ್ಷಾಗಳಿಗೆ ಭಾರೀ ಬೇಡಿಕೆ ಬಂದಿದೆ. ರಾಮ ಮಂದಿರ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರು ಇ- ರಿಕ್ಷಾಗಳ ಮೊರೆ ಹೋಗುತ್ತಿದ್ದಾರೆ. “ಮೊದಲು ಬಾಡಿಗೆ ರಿಕ್ಷಾ ಓಡಿಸುತ್ತಿದೆ. ಈಗ ಇಎಂಐನಲ್ಲಿ ಸ್ವಂತ ಇ-ರಿಕ್ಷಾ ತೆಗೆದುಕೊಂಡಿದ್ದೇನೆ. 6 ತಿಂಗಳ ಮೊದಲಿಗೆ ಹೋಲಿಕೆ ಮಾಡಿದರೆ ನನ್ನ ಆದಾಯ ದುಪ್ಪಟ್ಟಾಗಿದೆ. ದಿನಕ್ಕೆ ಸುಮಾರು 1 ಸಾವಿರ ರೂ. ದುಡಿಯುತ್ತೇನೆ’ ಎಂದು ಇ-ರಿಕ್ಷಾ ಚಾಲಕ ಮೊಹಮ್ಮದ್ ಆರೀಫ್ ಹೇಳಿದ್ದಾರೆ.
ರಾಹುಲ್-ಪ್ರಿಯಾಂಕಾಗಿಲ್ಲ ಆಹ್ವಾನ: ಮಂದಿರದ ಉದ್ಘಾಟನ ಸಮಾರಂಭಕ್ಕೆ ಗಾಂಧಿ ಕುಟುಂಬದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಾತ್ರ ಟ್ರಸ್ಟ್ ಆಹ್ವಾನ ನೀಡಿದೆ. ಆದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರಿಗೆ ಆಹ್ವಾನ ನೀಡಿಲ್ಲ. “ಪ್ರಭು ರಾಮ ಪ್ರತಿಯೊಬ್ಬರಿಗೂ ಸೇರಿದವನು. ಕೆಲವು ಮಾನದಂಡಗಳ ಮೇಲೆ ಆಯ್ದ ಹಲವರಿಗೆ ಮಾತ್ರ ಆಹ್ವಾನ ನೀಡ ಲಾಗಿದೆ. ಇದು ರಾಜಕೀಯ ಸಮಾರಂಭ ಆಗಬಾರದು’ ಎಂದು ವಿಎಚ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಎಂದರು.
ಛತ್ತೀಸಗಢದಲ್ಲಿ 22ರಂದು ಮದ್ಯ, ಮಾಂಸ ನಿಷೇಧ
“ಜ. 22ರಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ಹಿನ್ನೆಲೆಯಲ್ಲಿ ಅಂದು ಛತ್ತೀಸಗಢದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಘೋಷಿಸಿದ್ದಾರೆ.
ಆಯೋಧ್ಯೆಯಲ್ಲಿ ಪ್ರಭು ರಾಮನ ದರ್ಶನಕ್ಕೆ ನನಗೆ ಆಹ್ವಾನದ ಅಗತ್ಯವಿಲ್ಲ. ಏಕೆಂದರೆ ಶ್ರೀರಾಮನು ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ.
ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ