ತುಮಕೂರು: ಡಾ. ಶಿವಕುಮಾರ ಸ್ವಾಮೀಜಿ ಸಾಧನೆ ಭಗೀರಥ ಸಾಧನೆಯಾಗಿದೆ. ಧರೆಗೆ ಗಂಗೆ ತರಲು ಭಗೀರಥ ತಪಸು ಮಾಡಿ ಗಂಗೆ ಕರೆತಂದ ಈ ಸಮಾಜದಲ್ಲಿ ಎಲ್ಲ ವರ್ಗದ ಬಡ ಮಕ್ಕಳಿಗೆ ಜ್ಞಾನದ ಗಂಗೆ ಹರಿಸಲು ಶ್ರೀಗಳು ಆಧುನಿಕ ಭಗೀರಥನ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಅಭಿಪ್ರಾಯಿಸಿದರು.
ಸಿದ್ಧಗಂಗಾ ಮಠದ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂ.ಡಾ.ಶಿವಕುಮಾರ ಸ್ವಾಮೀಜಿ 112ನೇ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಗಳು ಸಮಾಜ ಕೊಟ್ಟ ಕಾಣಿಕೆಯನ್ನು ಸಮಾಜಕ್ಕೆ ಮರಳಿ ನೀಡಿದ್ದಾರೆ.
ಮಠ ಎಂದರೆ ಹೇಗಿರಬೇಕು ಎಂದು ಜಗತ್ತಿಗೆ ತೋರಿಸಿದ ಶ್ರೀಗಳ ಸಾಧನೆ ಅಪಾರ ಎಂದು ಹೇಳಿದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಲಿಂ.ಡಾ.ಶಿವಕುಮಾರ ಸ್ವಾಮೀಜಿಯವರು ಕಾಯಕ ಸೇವೆಯ ಮೂಲಕ ಅಪಾರ ಸಾಧನೆ ಮಾಡಿದ್ದಾರೆ ಎಂದರು.
ಚಿತ್ರದುರ್ಗ ಮುರುಘಾಮಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಶ್ರೀಗಳು ಶತಮಾನದ ಮಹಾ ಶಿವಯೋಗಿಗಳು. ಶಿವಯೋಗಿಯಾಗಿ ಸಾಧಿಸಿದವರು ಶ್ರೀಗಳು ಎಂದು ಹೇಳಿದರು.
ದಾಸೋಹ ದಿನ: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಏ.1 ರಂದು ಶ್ರೀಗಳ ಜಯಂತಿಯನ್ನು ನಾಡಿನ ಜನತೆ ಅಂತಾರಾಷ್ಟ್ರೀಯ ದಾಸೋಹ ದಿನವನ್ನಾಗಿ ಆಚರಿಸಬೇಕು. ಸರ್ಕಾರ ಆಚರಣೆ ಮಾಡದಿದ್ದರೂ ಭಕ್ತರು ಮನೆಯಲ್ಲಿ ದಾಸೋಹ ದಿನ ಎಂದು ಆಚರಣೆ ಮಾಡಬೇಕು ಎಂದು ಕರೆ ನೀಡಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಜ್ಜುನಿ ಜಗದ್ಗುರುಗಳಾದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಮುಂಡರಗಿ ಮಠದ ಅನ್ನದಾನ ಸ್ವಾಮೀಜಿ, ಡಂಬಳ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಕೊಟ್ಟೂರು ಸ್ವಾಮೀಜಿ ಮಠದ ಸಂಗನಬಸವ ಸ್ವಾಮೀಜಿ, ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ,
ಹುಕ್ಕೇರಿ ಮಠದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ಹಾವೇರಿ ರಕ್ತ ಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಸಿದ್ದರು. ಶ್ರೀಗಳ ಜಯಂತಿ ಅಂಗವಾಗಿ ಅವರ ಗದ್ದುಗೆಯನ್ನು ರುದ್ರಾಕ್ಷಿ ಮತ್ತು ಭೂತಿಯಿಂದ ಅಲಂಕರಿಸಲಾಗಿತ್ತು. ರಂಗೋಲಿಯಿಂದ ಶ್ರೀಗಳ ಭಾವಚಿತ್ರ ಬಿಡಿಸಿದ್ದು ಭಕ್ತರ ಗಮನ ಸೆಳೆಯಿತು.