ಉಡುಪಿ: ಮುಂದಿನ ಮಳೆಗಾಲ ಪ್ರಾರಂಭ ವಾಗುವವರೆಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಸೂಚನೆ ನೀಡಿದರು. ಬುಧವಾರ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ನೀರಿನ ಸಮಸ್ಯೆ ಕುರಿತಾಗಿ ಚರ್ಚಿಸಿದರು.
ಮೇ 19ರಿಂದ ನೀರು ಪೂರೈಕೆ ರೇಷನಿಂಗ್ ಮೂಲಕ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಮತ್ತು ಪ್ರತೀ ವಾರ್ಡ್‌ನ ಬೇಡಿಕೆಯಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೀರು ಪೂರೈಕೆಯ ಬಗ್ಗೆ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಹೇಳಿದರು.
ಮಳೆಗಾಲ ಪೂರ್ವ ಸಿದ್ಧತೆಯಾಗಿ ಚರಂಡಿ ಹೂಳೆತ್ತುವುದು, ಟಾಸ್ಕ್ಫೋರ್ಸ್ ಹಾಗೂ ಇತರ ತುರ್ತು ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಶೀಘ್ರ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದರು. ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ರಮೇಶ್ ನಾಯ್ಕ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕುಡಿಯುವ ನೀರಿನ ಸಮಸ್ಯೆ ಉಲ್ಬಣ
ನಗರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬಹುತೇಕ ವಾರ್ಡ್‌ಗಳ ಮನೆಗಳಲ್ಲಿ ನೀರಿನ ಕೊರತೆ ಎದುರಾಗಿದೆ.
Related Articles
ಪ್ರಸ್ತುತ ಹಿರಿಯಡಕ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ಅಲ್ಪ ಪ್ರಮಾಣದ ನೀರು ಇದೆ. ಸದ್ಯಕ್ಕೆ ನಿರಂತರ ನೀರು ಪೂರೈಕೆಯಾಗುತ್ತಿದ್ದು, ನಗರದ ಎಲ್ಲ ಭಾಗಗಳಿಗೆ ಒತ್ತಡದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಬನ್ನಂಜೆ, ಮಣಿಪಾಲ, ಪರ್ಕಳ, ಹೆರ್ಗ, ಇಂದ್ರಾಳಿ, ಶಿರಿಬೀಡು, ಒಳಕಾಡು ಭಾಗದ ಕೆಲವು ಭಾಗದಲ್ಲಿ ಮನೆಗಳಿಗೆ ಸರಿಯಾಗಿ ನೀರು ಲಭ್ಯವಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸದ್ಯಕ್ಕೆ ಎರಡು ದಿನಗಳಕಾಲ ಬಜೆ ಡ್ಯಾಂನಲ್ಲಿ ನಿರ್ವಹಣೆ ಕೆಲಸ ಇರುವುದರಿಂದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎರಡು ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಈಗಾಗಲೆ ನಗರಸಭೆ ತಿಳಿಸಿದೆ. ಮನೆಗಳು ಸೇರಿದಂತೆ ಕೆಲವು ಅಪಾರ್ಟ್ ಮೆಂಟ್‌ಗಳಿಗೆ ನೀರಿನ ಸಮಸ್ಯೆ ತೀವ್ರಗೊಂಡಿದೆ. ಖಾಸಗಿ ಟ್ಯಾಂಕರ್ ನೀರನ್ನೆ ಹೆಚ್ಚಾಗಿ ನಂಬಿದ್ದಾರೆ. ಅಲ್ಲದೆ ಹೊಟೇಲ್, ಕ್ಯಾಂಟೀನ್, ಲಾಡ್ಜ್, ಕೈಗಾರಿಕೆ ಘಟಕ, ಮೀನುಗಾರಿಕೆ ವಲಯ ಎಲ್ಲೆಡೆ ನೀರಿನ ಬಿಸಿ ಮುಟ್ಟಿದ್ದು, ಜೂನ್ ಅಂತ್ಯದ ಒಳಗೆ ಮುಂಗಾರು ಪೂರ್ವ ಮಳೆಯಾಗದಿದ್ದರೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.