Advertisement

Rabkavi Banhatti; ಸಾವಯವ ಕೃಷಿ ಮೂಲಕ ಹೊರಟ್ಟಿ ದಂಪತಿಗಳ ಉತ್ತಮ ಆದಾಯ

07:43 PM Apr 05, 2024 | Team Udayavani |

ರಬಕವಿ ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ಯಲ್ಲಟ್ಟಿಯ ರಸ್ತೆಯ ಆಸಂಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ತಮ್ಮ 20 ಗುಂಟೆ ಜಮೀನಿನಲ್ಲಿ ಸಾವಯವ ಕೃಷಿಯ ಮೂಲಕ ಸೌತೆಕಾಯಿ, ಹಿರೇಕಾಯಿ ಮತ್ತು ಹಾಗಲಕಾಯಿಯನ್ನು ಬೆಳೆದ ರೈತ ದಂಪತಿ ದಯಾನಂದ ಹೊರಟ್ಟಿ ಮತ್ತು ಪ್ರೀತಿ ಹೊರಟ್ಟಿ ಪ್ರತಿನಿತ್ಯ ಉತ್ತಮ ಆದಾಯ ಹೊಂದುತ್ತಿದ್ದಾರೆ.

Advertisement

ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ರಾಮನಗೌಡ ಅವರ ಮಾರ್ಗದರ್ಶನದಲ್ಲಿ ಕೃಷಿಯನ್ನು ಮಾಡುತ್ತಿರುವ ಇವರು, ತಮ್ಮ20 ಗುಂಟೆ ಜಮೀನಿನಲ್ಲಿ ಸಾವಯವ ಕೃಷಿಯ ಮೂಲಕ ಮೂರು ತರಹದ ತರಕಾರಿಗಳನ್ನು ಬೆಳೆಯುವುದರ ಜೊತೆಗೆ ಈ ಭಾಗದ ಇತರೆ ರೈತರಿಗೆ ದಂಪತಿಗಳು ಮಾದರಿಯಾಗಿದ್ದಾರೆ.

ಒಟ್ಟು ಮೂರು ತಿಂಗಳ ಬೆಳೆಯಾಗಿರುವ ಇವುಗಳು ಸದ್ಯ ಬೇಸಿಗೆಯಲ್ಲಿ ಬಾರಿ ಬೇಡಿಕೆ ಇರುವುದರಿಂದ ಲಾಭ ಮಾತ್ರ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ದಯಾನಂದ.

ಬೀಜಗಳನ್ನು ನಾಟಿ ಮಾಡುವುದರಿಂದ ಈಗ ಅವುಗಳನ್ನು ಮಾರಾಟ ಮಾಡುವವರೆಗೆ ದಯಾನಂದ ಮತ್ತು ಅವರ ಪತ್ನಿ ಪ್ರೀತಿ ಇಬ್ಬರೇ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಸೂರ್ಯೋದಯಕ್ಕಿಂತ ಮೊದಲೇ ಎದ್ದು ಸವತೆ ಹಾಗೂ ಹಿರೇಕಾಯಿಗಳನ್ನು ಹರಿದು ಅವುಗಳನ್ನು ಬುಟ್ಟಿಗೆ ತುಂಬಿಸುವ ಕಾರ್ಯ ಮಾಡುತ್ತಾರೆ. ಬಿಸಿಲು ಏರುವವರೆಗೆ ದುಡಿದು ನಂತರ ಸಂಜೆ ಮತ್ತೆ ತೋಟಕ್ಕೆ ಇಳಿಯುತ್ತಾರೆ. ಇದು ಕೂಡಾ ಅವರ ಆದಾಯವನ್ನು ಹೆಚ್ಚಿಸಿದೆ. ಸದ್ಯ ಸಾಕಷ್ಟು ಬಿಸಿಲು ಇದ್ದು ಸಾವಯವ ಗೊಬ್ಬರನ್ನು ಬಳಸುತ್ತಿರುವುದರಿಂದ ಮಾತ್ರ ಬೆಳೆ ಬದುಕಿದೆ ಎನ್ನುತ್ತಾರೆ ದಯಾನಂದ.

ಡಿ. ಕಂಪ್ರೋಜರ್, ಗೋಕಾಮೃತ, ಎರೆಜಲ, ಬೇವೆರಿಯಾ ಔಷಧಿ ತಯಾರಿಸಿ ಬೆಳೆಗಳಿಗೆ ನಿಡಲಾಗಿದೆ. ಅಲ್ಲದೇ ವರ್ಟಿಸಿಲೆಮ್‌ನ್ನು ಕೂಡಾ ಸಿಂಪರಣೆ ಮಾಡಿದ್ದೇವೆ ಇದರಿಂದ ರೋಗ ತಡೆಗಟ್ಟುವುದರ ಜೊತೆಗೆ ಇಳುವರಿ ಕೂಡಾ ಹೆಚ್ಚಾಗುತ್ತದೆ

Advertisement

‘ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಎರೆ ಜಲವನ್ನು ಒಂದು ಲೀಟರ್‌ಗೆ ರೂ. 80 ರಿಂದ ರೂ. 100ವರೆಗೆ ಮಾರಾಟ ಮಾಡುತ್ತಾರೆ. ಆದರೆ ದಯಾನಂದ ಒಂದು ಬ್ಯಾರಲ್‌ನಲ್ಲಿ ಎರೆಜಲ ಘಟಕವನ್ನು ಆರಂಭಿಸಿದ್ದು, 15 ದಿನಕ್ಕೆ ಅಂದಾಜು 60 ಲೀಟರ್ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ.

1.5 ಲಕ್ಷ ಆದಾಯ ನಿರೀಕ್ಷೆ : ಗೋಕೃಪಾಮೃತವನ್ನು ಬಳ್ಳಿಗಳಿಗೆ ಸಿಂಪಡಿಸುವುದರಿಂದ ಹೂವು ಉತ್ತಮವಾಗಿ ಬರುವುದರ ಜೊತೆಗೆ ಕೀಟಗಳ ಕಾಟ ಕೂಡಾ ಕಡಿಮೆ ಮಾಡುತ್ತದೆ. ಇಲ್ಲಿಯವರೆಗೆ ಅಂದಾಜು ರೂ. 10 ಸಾವಿರ ಖರ್ಚು ಮಾಡಿದ್ದು, ಮೂರು ತಿಂಗಳಿಗೆ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ನಿರೀಕ್ಷಿಸಿದ್ದೇನೆ’ ಎನ್ನುತ್ತಾರೆ ಕೃಷಿಕ ದಯಾನಂದ.

ಮಾರುಕಟ್ಟೆ : ಇವರ ಬೆಳೆ ತನ್ನದೇ ಆದ ಗ್ರಾಹಕರನ್ನು ಹೊಂದಿದ್ದು, ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಿದ್ದು, ಗ್ರಾಹಕರೇ ನೇರವಾಗಿ ಅವರ ತೋಟಕ್ಕೆ ಬಂದು ಸವತೆ ಮತ್ತು ಹಿರೇಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಔಷಧ ಮತ್ತು ಗೊಬ್ಬರಗಳ ವೆಚ್ಚವಿಲ್ಲದೇ ಬೆಳೆದ ಬೆಳೆಯಿಂದ ನಿತ್ಯ ರೂ. 1500 ರಿಂದ ರೂ. 2000 ಆದಾಯ ಬರುತ್ತಿದ್ದು ಇನ್ನೂ ಹೆಚ್ಚಿನ ಬೆಲೆ ಬರುವ ಸಾಧ್ಯತೆ ಇರುವುದರಿಂದ ಲಾಭ ಕೂಡಾ ಹೆಚ್ಚಾಗಲಿದೆ ಎನ್ನುತ್ತಾರೆ ದಯಾನಂದ.

ಮುಂದಿನ ದಿನಗಳಲ್ಲಿ ಇನ್ನಷ್ಟು ತಾವೇ ತಯಾರಿಸಿದ ಸಾವಯವ ಗೊಬ್ಬರಗಳಿಂದ ಮತ್ತಷ್ಟು ತರಕಾರಿ ಬೆಳೆಯಲು ಯೋಜನೆಗಳನ್ನು ಹಾಕುತ್ತಿರುವ ದಯಾನಂದ ದಂಪತಿಗಳು ಪ್ರತಿಯೊಬ್ಬರು ಶುದ್ಧವಾದ ಆಹಾರ ಸೇವಿಸಲಿ ಆರೋಗ್ಯವಂತರಾಗಿ ಬಾಳಲಿ ಎಂಬುದು ಅವರ ಆಶಯವಾಗಿದೆ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next