ಪಾಟ್ನಾ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಆರ್ ಜೆಡಿ ಜೊತೆ ಕೈಜೋಡಿಸಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ನಿತೀಶ್ ಬಿಹಾರದ ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ:
ನಿತೀಶ್ ಕುಮಾರ್ ಮಂಗಳವಾರ(ಆಗಸ್ಟ್ 09) ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಬಿಹಾರದ ಜನತೆ ನಿತೀಶ್ ಕುಮಾರ್ ಅವರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು.
“2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಎನ್ ಡಿಎ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದೇವು. ಜನರು ಜೆಡಿಯು ಮತ್ತು ಎನ್ ಡಿಎಗೆ ಜನಾದೇಶ ನೀಡಿದ್ದರು. ನಾವು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದರೂ ಕೂಡಾ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆದರೆ ಇಂದೇನಾಗಿದೆ ನಿತೀಶ್ ಬಿಹಾರದ ಜನತೆ ಮತ್ತು ಬಿಜೆಪಿಗೆ ದ್ರೋಹ ಎಸಗಿಬಿಟ್ಟಿದ್ದಾರೆ ಎಂದು ಜೈಸ್ವಾಲ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಜೆಡಿಯು ಪಕ್ಷವನ್ನು ದುರ್ಬಲಗೊಳಿಸಲು ಹೊರಟಿದ್ದಲ್ಲದೇ, ನಮ್ಮ ಪಕ್ಷವನ್ನು ಅವಮಾನಿಸಿರುವುದಾಗಿ ನಿತೀಶ್ ಕುಮಾರ್ ಆರೋಪಿಸಿದ್ದರು. ಬಳಿಕ ಆರ್ ಜೆಡಿಯ ತೇಜಸ್ವಿ ಯಾದವ್ ಜತೆಗೂಡಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಭಾರತೀಯ ಜನತಾ ಪಕ್ಷ ಮೈತ್ರಿ ಧರ್ಮವನ್ನು ಪಾಲಿಸುತ್ತದೆ. ಆದರೆ ಇದು ನಿತೀಶ್ ಕುಮಾರ್ ಅವರ ತಪ್ಪು ನಿರ್ಧಾರವಾಗಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ. ಬಿಜೆಪಿ 63 ಶಾಸಕರನ್ನು ಗೆದ್ದು, ಜೆಡಿಯು 36 ಶಾಸಕರ ಬಲ ಹೊಂದಿದ್ದಾಗ, ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೆ ಇಂದು ನಿತೀಶ್ ವ್ಯಾಪಾರಕ್ಕಿಳಿದಿದ್ದಾರೆ ಎಂದು ಸಿಂಗ್ ಟೀಕಿಸಿದ್ದಾರೆ.