Advertisement

Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ

02:20 PM Nov 08, 2024 | Team Udayavani |

ಬೆಂಗಳೂರು: ಅಪರಾಧ ಚಟುವಟಿಕೆಗಳು ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಿಸುವ ಕುರಿತು ಆಯಾ ವಿಭಾಗದ ಡಿಸಿಪಿ ಹಾಗೂ ಸ್ಥಳೀಯ ಠಾಣಾ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಬೆಂಗಳೂರಿನ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ ಯಲ್ಲಿ ಗುರುವಾರ ಸಂಜೆ 4.30ರಿಂದ ರಾತ್ರಿ 10.30ರ ವರೆಗೆ ನಡೆದ ಸಭೆಯಲ್ಲಿ ನಗರ ಪೊಲೀಸ್‌ ಕಮಿಷನ ರೇಟ್‌ ವ್ಯಾಪ್ತಿಯ ವಿಭಾಗ ಹಾಗೂ ಉಪವಿಭಾಗವಾರು ಅಪರಾಧ ಪ್ರಕರಣಗಳು, ಪತ್ತೆ ಕಾರ್ಯ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.

6 ಗಂಟೆಗಳ ಕಾಲ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಗರದ 8 ವಿಭಾಗಗಳ ಪೈಕಿ ಆಗ್ನೇಯ, ಪೂರ್ವ, ಪಶ್ಚಿಮ ಹಾಗೂ ಉತ್ತರ ವಿಭಾಗಗಳ ವ್ಯಾಪ್ತಿಯ ಪೊಲೀಸ್‌ ಠಾಣೆಗಳ ಅಪರಾಧ ಪ್ರಕರಣಗಳು ಹಾಗೂ ಪತ್ತೆ ಕಾರ್ಯ, ತನಿಖೆ ಕುರಿತು ಸಂಬಂಧಪಟ್ಟ ಡಿಸಿಪಿಗಳು ಹಾಗೂ ಎಸಿಪಿಗಳಿಂದ ಮಾಹಿತಿ ಪಡೆದುಕೊಂಡರು. ಉಳಿದ ನಾಲ್ಕು ವಿಭಾಗಗಳ ಬಗ್ಗೆ ಮತ್ತೂಂದು ದಿನ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಡಿಸಿಪಿ ಹಾಗೂ ಎಸಿಪಿಗಳು ಪ್ರತಿನಿತ್ಯ ತಮ್ಮ ವ್ಯಾಪ್ತಿಯ ಒಂದೊಂದು ಪೊಲೀಸ್‌ ಠಾಣೆಗೆ ಭೇಟಿ ನೀಡಬೇಕು. ವಾರಕೊಮ್ಮೆ ಪ್ರಕರಣಗಳ ತನಿಖೆ, ಪತ್ತೆ ಕಾರ್ಯ ಕುರಿತು ಪರಿಶೀಲಿಸಬೇಕು ಸೇರಿ ಅಪರಾಧಗಳ ನಿಯಂತ್ರಣ ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಣ ಕುರಿತಂತೆ ಅಧಿಕಾರಿಗಳಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸತೀಶ್‌ ಕುಮಾರ್‌, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ, ಡಿಸಿಪಿ, ಎಸಿಪಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next