ಬೆಂಗಳೂರು: ರಾಜಧಾನಿಯ ಬಹುತೇಕ ಕಡೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಸಂಜೆ ವೇಳೆ ಕೆಲಸ ಮುಗಿಸಿ ಮನೆ ಸೇರುವವರು ಕಿರಿಕಿರಿ ಅನುಭವಿಸಿದರು. ಜತೆಗೆ ಜಿಟಿ, ಜಿಟಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊಡಿಗೇಹಳ್ಳಿ, ಮಾರುತಿ ಮಂದಿರ, ಮಾರೇನಹಳ್ಳಿ, ಯಲಹಂಕ, ಚಿಕ್ಕಬಿದರಕಲ್ಲು, ಯಲಂಹಕ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಉತ್ತರಹಳ್ಳಿ, ಸದಾಶಿವನಗರ, ಶೇಷಾದ್ರಿಪುರ, ಅಂಜನಾಪುರದಲ್ಲಿ ಮಳೆ ಸುರಿಯಿತು. ಕಂಟೋನ್ಮೆಂಟ್, ದೊಮ್ಮಲೂರು, ಇಂದಿರಾನಗರ, ಮಲ್ಲೇಶ್ವರ, ಶಿವಾಜಿನಗರ, ಹಲಸೂರು, ಕಲ್ಯಾಣ್ ನಗರ, ಹೆಬ್ಟಾಲ, ಜಾಲಹಳ್ಳಿ, ಮತ್ತಿಕೆರೆ, ಪೀಣ್ಯ, ಯಶವಂತಪುರ, ಬನಶಂಕರಿ, ಕೆಂಗೇರಿ, ಆರ್.ಆರ್.ನಗರ, ಬಸವನಗುಡಿ, ನಂದಿನಿ ಲೇಔಟ್, ನಾಯಂಡಹಳ್ಳಿ, ಕೆಐಎಎಲ್ ವಿಮಾನ ನಿಲ್ದಾಣ, ವಿಜಯನಗರ, ವಿದ್ಯಾರಣ್ಯಪುರ ಸೇರಿದಂತೆ ಇನ್ನೂ ಹಲವು ಕಡೆ ಮಳೆ ಬಿದ್ದಿದೆ.
ವಾಹನ ಸವಾರರ ಪರದಾಟ: ಸಂಜೆ ಸುರಿದ ಮಳೆಗೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಚೇರಿಗಳಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಉದ್ಯೋಗಿಗಳು ಪರದಾಡಿದರು. ಅನೇಕ ಕಡೆ ನಿಧಾನಗತಿಯ ವಾಹನ ಸಂಚಾರವಿತ್ತು. ಇನ್ನೂ ಕೆಲವು ಅಂಡರ್ ಪಾಸ್‌ಗಳನ್ನು ಮುಚ್ಚಲಾಗಿತ್ತು. ಸಿಬಿಐ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರ ಉಂಟಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವ ಹೆಬ್ಟಾಳ ಮೇಲ್ಸೇತುವೆ ಮೇಲೆ ಕೂಡ ನೀರು ನಿಂತು ಕೆಲ ಹೊತ್ತು ವಾಹನ ಸವಾರರು ಪರದಾಡುವಂತಾಗಿತ್ತು.
ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ್ ಹೋಟೆಲ್ ಹತ್ತಿರ ಮಳೆ ನೀರು ನಿಂತಿದ್ದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸಂಚಾರ ಪೊಲೀಸರು ನೀರು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು.
ಮಾರ್ಕೆಟ್ ಫ್ಲೈ ಓವರ್ ಡೌನ್ ರಾಂಪ್ ಹತ್ತಿರ ನೀರು ನಿಂತಿರುವುದರಿಂದ ಎಸ್‌ಜೆಪಿ ಜಂಕ್ಷನ್ ಕಡೆಗೆ ನಿಧಾನ ಸಂಚಾರ ಉಂಟಾಗಿತ್ತು. ವಿಂಡ್ಸರ್ ಮ್ಯಾನರ್ ಸೇತುವೆ ಹತ್ತಿರ, ಕ್ವೀನ್ಸ್ ರಸ್ತೆ, ಬಿನ್ನಿ ಮಿಲ್ ಯಿಂದ ಹುಣಸೇಮರದ ಕಡೆಗೆ ಸಾಗುವ ಮಾರ್ಗದಲ್ಲಿ ನೀರು ನಿಂತು ಸಮಸ್ಯೆಯಾಗಿತ್ತು. ಆರ್.ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾರಿ ಮುಖ್ಯರಸ್ತೆಯ ಸಂಜಯನಗರ ಕ್ರಾಸ್ ಬಳಿ ನೀರು ನಿಂತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.
ಕಿತ್ತನಹಳ್ಳಿಯಲ್ಲಿ 4 ಸೆಂ.ಮೀ. ಮಳೆ:
ಬೆಂಗಳೂರು ಉತ್ತರ ವ್ಯಾಪ್ತಿಯ ಕಿತ್ತನಹಳ್ಳಿಯಲ್ಲಿ 4 ಸೆಂ.ಮೀ., ಮಾದಾವರ 3.3, ಮಾದನಾಯಕನಹಳ್ಳಿ 2.6, ಕೊಡಿಗೇಹಳ್ಳಿ 2.5, ಮಾರುತಿ ಮಂದಿರ 2.4, ಶೆಟ್ಟಿಹಳ್ಳಿ 2.5, ಬಾಗಲಗುಂಟೆ 2.2, ಯಲಹಂಕ ಚೌಡೇಶ್ವರಿ ನಗರ ವಿಶ್ವನಾಥ್ ನಾಗೇನಹಳ್ಳಿ ತಲಾ 2.1, ಆರ್.ಆರ್. ನಗರ ಮತ್ತು ಹಾರೋಹಳ್ಳಿ ತಲಾ 1.9, ಮಾರೇನಹಳ್ಳಿ 1.8, ವಿದ್ಯಾರಣ್ಯಪುರ ಮತ್ತು ಅಡಕಮಾರನಹಳ್ಳಿಯಲ್ಲಿ ತಲಾ 1.8, ಕಾಟನ್ ಪೇಟೆ 1.7 ಮತ್ತು ಬಾಗಲೂರು 1.7, ಚಾಮರಾಜಪೇಟೆ 1.6, ನಂದಿನಿ ಲೇಔಟ್ 1.6, ರಾಜಮಹಲ್ ಗುಟ್ಟಹಳ್ಳಿ 1 ಸೆಂ.ಮೀ ಮಳೆ ಸುರಿದಿದೆ.