ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಉತ್ಸವದ ಮೇಲೆ ನಡೆದ ದಾಳಿ ಖಂಡಿಸಿ ಟೌನ್‌ಹಾಲ್ ಬಳಿ ಹಿಂದೂಪರ ಸಂಘಟನೆಗಳು ಶುಕ್ರವಾರ ಗಣೇಶ ಮೂರ್ತಿ ಹಿಡಿದುಕೊಂಡು ಪ್ರತಿ ಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು. ಆ ವೇಳೆ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆದು ಹೈಡ್ರಾಮಕ್ಕೆ ಟೌನ್‌ಹಾಲ್ ಸಾಕ್ಷಿಯಾಯಿತು.
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಟೌನ್‌ಹಾಲ್ ಬಳಿ ಪ್ರತಿಭಟನೆಗೆ ಕರೆ ನೀಡಿತ್ತು. ಟೌನ್‌ಹಾಲ್‌ನತ್ತ ಜಮಾಯಿಸುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ನಲ್ಲಿ ತುಂಬಿ ಕರೆದೊಯ್ದರು.
ಗಣೇಶ ಮೂರ್ತಿ ವಶಪಡಿಸಿಕೊಂಡ ಖಾಕಿ: ಹಿಂದೂ ಪರ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಗಣಪತಿ ಬಪ್ಪಾ ಮೋರಿಯಾ ಎಂದು ಘೋಷಣೆ ಕೂಗುತ್ತಾ ಮತ್ತೂಂದು ಹಿಂದೂ ಸಂಘಟನಗಳ ಪರ ಕಾರ್ಯಕರ್ತರು ಗಣೇಶ ಮೂರ್ತಿ ಹೊತ್ತು ಟೌನ್‌ಹಾಲ್‌ನತ್ತ ಬಂದರು. ಆ ವೇಳೆ ಗಣೇಶನ ಮೂರ್ತಿ ವಶಕ್ಕೆ ಪಡೆದ ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಹಿಂದು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ನಂತರ ವಶಪಡಿಸಿಕೊಂಡ ಗಣೇಶ ಮೂರ್ತಿ ಪೊಲೀಸ್ ಜೀಪ್‌ನಲ್ಲಿ ತೆಗೆದುಕೊಂಡು ಹೋದರು.
ನಾನು ವಿಶ್ವ ಹಿಂದೂ ಪರಿಷತ್ ಸದಸ್ಯ. ವೃತ್ತಿಯಲ್ಲಿ ನಾನು ವಕೀಲ. ನಾನು ಕೇಸರಿ ಶಾಲು ಹಾಕಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಬಂಧಿಸಿದ್ದಾರೆ. ಕೇಸರಿ ಶಾಲು ಹಾಕುವುದೇ ಹಾಗಿದ್ರೆ ತಪ್ಪಾ, ಟೌನ್‌ಹಾಲ್ ನಲ್ಲಿ ಬೆಂಗಳೂರು ಗಣೇಶ ಉತ್ಸವ ಸಮಿತಿ ಕಡೆಯಿಂದ ಸಭೆ ಇತ್ತು. ಹೀಗಾಗಿ ಸಭೆ ನೋಡಲು ನಾನು ಬಂದಿದ್ದೆ ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯ ರತ್ನಾಕರ್ ಭಟ್ ಆರೋಪಿಸಿದ್ದಾರೆ.