ಬೆಂಗಳೂರು: ಬೆಂಗಳೂರಿನ ಅಗತ್ಯಕ್ಕೆ ಬೇಕಾದಷ್ಟು ನೀರು ಬೆಂಗಳೂರಿನ ಒಳಗೆಯೇ ಲಭ್ಯವಿದ್ದು, ಲಿಂಗನಮಕ್ಕಿಯಿಂದ, ಮೇಕೆದಾಟಿನಿಂದ ನಗರಕ್ಕೆ ನೀರು ಪೂರೈಸುವ ಯೋಜನೆಗಳನ್ನು ಕೈ ಬಿಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ವಿಜ್ಞಾನಿ ಟಿ.ವಿ.ರಾಮಚಂದ್ರ ಸಲಹೆ ನೀಡಿದ್ದಾರೆ.
ಗಾಂಧಿ ಭವನದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆಯು ಮಾಧವ ಗಾಡ್ಗಿಳ್ ವರದಿ ಅನುಷ್ಠಾನದ ಬಗ್ಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ವಾರ್ಷಿಕವಾಗಿ 750 ರಿಂದ 800 ಮಿಲಿ ಮೀಟರ್ ಮಳೆಯಾಗುತ್ತದೆ. ಇದರರ್ಥ 15 ಟಿಎಂಸಿ ನೀರನ್ನು ನಾವು ಮಳೆ ನೀರು ಕೊಯ್ಲು ಪದ್ಧತಿಯ ಮೂಲಕ ಸಂಗ್ರಹಿಸಬಹುದು. ಹಾಗೆಯೇ 16 ಟಿಎಂಸಿಯಷ್ಟು ನೀರು ಇಲ್ಲಿ ಕೆರೆ, ಅಂತರ್ಜಲಗಳಲ್ಲಿದ್ದು, ಒಟ್ಟು 31 ಟಿಎಂಸಿ ನೀರು ನಗರದೊಳಗೆ ಲಭ್ಯವಿದೆ. ಬೆಂಗಳೂರಿಗೆ ಬಳಕೆಗೆ ಬೇಕಾಗಿರುವ ನೀರು 18 ಟಿಎಂಸಿ ಮಾತ್ರ. ತನ್ಮೂಲಕ ನಗರದ ಬಳಕೆಗೆ ಅಗತ್ಯ ಪ್ರಮಾಣದ ನೀರು ನಗರದೊಳಗೆಯೇ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ನೀರಿನ ಮರು ಬಳಕೆಯಿಂದ ಜಲ ಮೂಲಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ನಗರದಲ್ಲಿರುವ ಕೆರೆಗಳ ಪುನರುಜ್ಜೀವನ ಕ್ರಮಗಳ ಮೂಲಕ ಅನ್ಯ ಊರಿನ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು. ಜಕ್ಕೂರು ಕೆರೆಯ ಅಭಿವೃದ್ಧಿಯ ಮಾದರಿ ನಮ್ಮ ಮುಂದಿದೆ. ಜಕ್ಕೂರು ಕೆರೆಯ ಹೂಳನ್ನು ತೆಗೆದು ಏನು ಮಾಡುವುದು ಎಂಬುದು ನಮ್ಮ ದೊಡ್ಡ ತಲೆ ನೋವಾಗಿತ್ತು. ನಾವು ಪಕ್ಕದ ರೈತರ ಮನವೊಲಿಸಿ ಸುಮಾರು 400 ಎಕರೆ ಕೃಷಿ ಭೂಮಿಗೆ ಹೂಳನ್ನು ಹಾಕಿದೆವು. ಇಂದು ಆ ರೈತರಿಗೆ ಉತ್ತಮ ಫಸಲು ಬರುತ್ತಿದೆ. ಜಕ್ಕೂರು ಕೆರೆಯ ಸುತ್ತಮುತ್ತಲಿರುವ ಬಾವಿಗಳಲ್ಲಿ ಉತ್ತಮ ಮಟ್ಟದಲ್ಲಿ ನೀರು ಲಭ್ಯವಿದೆ ಎಂದು ಹೇಳಿದರು.
ಬೆಳ್ಳಂದೂರು ಕೆರೆಯ ಶುದ್ಧೀಕರಣ ಪ್ರಯತ್ನ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಬೆಳ್ಳಂದೂರು ಮತ್ತು ವರ್ತೂರು ಕೆರೆಯ ನೀರನ್ನು ಜನ ಬಳಕೆಗೆ ಬಳಸುವುದರಿಂದ ಕಾವೇರಿ ನೀರಿನ ಮೇಲಿನ ನಮ್ಮ ಅವಲಂಬನೆ ಕಡಿಮೆ ಮಾಡಬಹುದು. ಅದೇ ರೀತಿ ಪ್ರತಿ ವಾರ್ಡ್‌ನಲ್ಲಿಯೂ ಕಿರು ಅರಣ್ಯ ಬೆಳೆಸಬೇಕು. ಯುವ ಜನರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಟಿ.ವಿ.ರಾಮಚಂದ್ರ ಸಲಹೆ ನೀಡಿದರು.
ಇನ್ನು ಮೇಕೆದಾಟು ಯೋಜನೆಗೆ 5,000 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಲಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಅರಣ್ಯಕ್ಕೆ 100 ಟಿಎಂಸಿ ನೀರನ್ನು ಸಂಗ್ರಹಿಸಿಡುವ ಸಾಮರ್ಥ್ಯವಿದೆ. 100 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಕಾಡು ನಾಶ ಮಾಡಿ ಸಿಮೆಂಟ್ ಕಟ್ಟೆ (ಡ್ಯಾಂ) ಕಟ್ಟಿ 45 ಟಿಎಂಸಿ ನೀರು ಸಂಗ್ರಹಿಸುತ್ತೇವೆ ಎಂಬುದರಲ್ಲಿ ಅರ್ಥವಿದೆಯೇ ಎಂದು ಅವರು ಪ್ರಶ್ನಿಸಿದರು.
ಹಾಗೆಯೇ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಪ್ರಯತ್ನವನ್ನು ನಾನು ನನ್ನ ಕೊನೆಯ ಉಸಿರು ಇರುವವರೆಗೂ ವಿರೋಧಿಸುತ್ತೇನೆ ಎಂದು ಟಿ.ವಿ. ರಾಮಚಂದ್ರ ಹೇಳಿದರು.
“ಸುರಂಗ ಮಾರ್ಗ ನಗರಕ್ಕೆ ಒಳ್ಳೆಯದಲ್ಲ’
ಸುರಂಗ ಮಾರ್ಗ ಕಾಮಗಾರಿ ನಗರಕ್ಕೆ ಒಳ್ಳೆಯದಲ್ಲ, ಇದರಿಂದ ನೀರಿನ ಹರಿವಿಗೆ ಅಡ್ಡಿಯಾಗು ವುದರ ಜೊತೆಗೆ ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೂ ಹಾನಿಯಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.