ಮಾಲೆ (ಮಾಲ್ಡೀವ್ಸ್): ಎ.ಎಫ್.ಸಿ. ಕಪ್ ಪ್ಲೇ ಆಫ್ ಪಂದ್ಯಾವಳಿಗಾಗಿ ಮಾಲ್ಡೀವ್ಸ್‌ಗೆ ಆಗಮಿಸಿದ ಬೆಂಗಳೂರು ಎಫ್.ಸಿ. ತಂಡ ಕೋವಿಡ್ ನಿಯಮ ಉಲ್ಲಂಘಿಸಿ ಆಕ್ರೋಶಕ್ಕೆ ಗುರಿಯಾಗಿದೆ. ದೇಶದ ಕ್ರೀಡಾ ಸಚಿವ ಅಹ್ಮದ್ ಮಲೂಫ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಂಡವನ್ನು ಭಾರತಕ್ಕೆ ವಾಪಸಾಗುವಂತೆ ಸೂಚಿಸಿದ್ದಾರೆ. ಈ ಆದೇಶದ ಬೆನ್ನಲ್ಲೇ ಎಲ್ಲ ಗ್ರೂಪ್ “ಡಿ’ ಪಂದ್ಯಗಳನ್ನು ಮುಂದೂಡಿದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ಮೂವರು ವಿದೇಶಿ ಆಟಗಾರರು ಹಾಗೂ ಸಿಬಂದಿಯೊಬ್ಬರು ಮಾಲ್ಡೀವ್ಸ್‌ನ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಛೀಮಾರಿ ಹಾಕಿಸಿಕೊಂಡರು. ಅಲ್ಲಿನ ಕ್ರೀಡಾ ಸಚಿವರು ಹೊರಡಿಸಿದ ಕಠಿನ ಆದೇಶದ ಬಳಿಕ ತಂಡದ ಮಾಲಕ ಪಾರ್ಥ್ ಜಿಂದಾಲ್ ಕ್ಷಮೆ ಯಾಚಿಸಿದ್ದು, ನಿಯಮ ಮುರಿದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುತ್ತೇವೆ, ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡರು.
ಇದನ್ನೂ ಓದಿ :ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಆದರೆ ಮಾಲ್ಡೀವ್ಸ್ ಕ್ರೀಡಾ ಸಚಿವರು ಇದಕ್ಕೆ ಸ್ಪಂದಿಸಲಿಲ್ಲ. ಈಗಾಗಲೇ ಇಲ್ಲಿಗೆ ಆಗಮಿಸಿರುವ ತಂಡಗಳಿಗೆ ವಾಪಸಾಗಲು ತಾವೇ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು ಎಫ್.ಸಿ ತಂಡದ ಸದಸ್ಯರು ಯಾವ ರೀತಿಯಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಭಾರತ ತಂಡದ ನಾಯಕ ಸುನೀಲ್ ಚೆಟ್ರಿ ಈ ತಂಡದ ನಾಯಕನೂ ಆಗಿದ್ದಾರೆ.