ಬೆಂಗಳೂರು: ಜಯನಗರದ ಖಾಸಗಿ ಶಾಲೆಯೊಂದರಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿ ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜಯನಗರದ ನಿವಾಸಿ ಬಾಲಕ ಅಶ್ವಿನ್ (11) ಹಲ್ಲೆಗೊಳಗಾದ ಬಾಲಕ. ಆತನ ತಂದೆ ಅನಿಲ್ ಕುಮಾರ್ ವಿ ಪೈ ದೂರಿತ್ತವರು.
ಅಶ್ವಿನ್ ಜಯನಗರದ ಹೋಲಿ ಕ್ರೈಸ್ಟ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ನ.7ರಂದು ಮಧ್ಯಾಹ್ನ ಅಶ್ವಿನ್ ಜತೆ ಇತರೆ ವಿದ್ಯಾರ್ಥಿಗಳು ಸೇರಿ ಕ್ಲಾಸ್ ರೂಂನಲ್ಲಿ ಗೋಸ್ಮಿಕ್ (ಗಮ್) ಮತ್ತು ನೀರನ್ನು ಚೆಲ್ಲುತ್ತಾ ಆಟವಾಡುತ್ತಿದ್ದರು. ಈ ವಿಚಾರವನ್ನು ಹಿಂದಿ ಟೀಚರ್‌ಗೆ ತಿಳಿಸಲು ಅಶ್ವಿನ್ ಹೋದಾಗ ಹಿಂದಿ ಟೀಚರ್ ಅಜ್ರತ್ ಎಂಬವರು ಬಾಲಕನ ಮುಖಕ್ಕೆ ಮರದ ಕೋಲಿನಿಂದ ಹೊಡೆದ ಪರಿಣಾಮ ಹಲ್ಲು ಮುರಿದಿತ್ತು. ಈ ವಿಚಾರವನ್ನು ಬಾಲಕನ ತಂದೆ ಗಮನಕ್ಕೆ ತಿಳಿಸದೇ ಶಾಲಾ ಸಿಬ್ಬಂದಿ ರಾಜಿ ಸಂಧಾನ ಮಾಡಲು ಯತ್ನಿಸಿದ್ದಾರೆ. ಬಳಿಕ ದೂರುದಾರರು ಮಗನಿಗೆ ಜಯನಗರ ಜನರಲ್ ಆಸ್ಪತ್ರೆಗೆ ಕರೆದುಕೊಂದು ಹೋಗಿ ಚಿಕಿತ್ಸೆ ಕೊಡಿಸಿ ಜಯನಗರ ಠಾಣೆಗೆ ಬಂದು ಹಿಂದಿ ಶಿಕ್ಷಕಿ ವಿರುದ್ಧ ದೂರು ನೀಡಿದ್ದಾರೆಂದು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.
ಆರೋಪ ತಳ್ಳಿ ಹಾಕಿದ ಶಿಕ್ಷಕಿ: ಬಾಲಕನ ಪಾಲಕರು ಮಾಡುತ್ತಿರುವ ಆರೋಪವನ್ನು ತಳ್ಳಿ ಹಾಕಿರುವ ಶಿಕ್ಷಕಿ, ಮಧ್ಯಾಹ್ನ ಊಟ ಮುಗಿಸಿಕೊಂಡು ಹೋಗಾವಾಗ ವಿದ್ಯಾರ್ಥಿಗಳು ಜಗಳ ಮಾಡಿಕೊಂಡಿದ್ದರು. ಆ ವೇಳೆ ಹಲ್ಲು ಮುರಿದು ಹೋಗಿದೆ. ವಿದ್ಯಾರ್ಥಿಗೆ ನಾನು ಏನು ಮಾಡಿಲ್ಲ. ಗಲಾಟೆ ನಿಯಂತ್ರಿಸಲು ಕೈಗೆ ಒಂದು ಏಟು ಕೊಟ್ಟಿದ್ದೆ. ಇದು ಬಿಟ್ಟು ಹಲ್ಲೆ ಮಾಡಲಿಲ್ಲ. ವಿದ್ಯಾರ್ಥಿ ಮುಖಕ್ಕೆ ಪಟಾಕಿ ಗಾಯವಾಗಿತ್ತು. ಮಕ್ಕಳು ಜಗಳ ಮಾಡಿ ಹಲ್ಲೆ ನಡೆಸಿರುವುದನ್ನು ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಶಿಕ್ಷಕಿಯು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ತಮ್ಮ ಪುತ್ರನಿಗೆ ಹಲ್ಲೆ ನಡೆಸಿರುವುದನ್ನು ಖಂಡಿಸಿದ ಪಾಲಕರು ಶಾಲೆಗೆ ನುಗ್ಗಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.