Advertisement

ಕೋಪದ ಕೈಗೆ ಬುದ್ದಿ; ಜೀವನ ಹಾಳು ; ಪುತ್ರನಿಗೆ ಬೆಂಕಿ ಹಚ್ಚಿದ ತಂದೆಯ ಪಶ್ಚಾತ್ತಾಪದ ಮಾತು…

11:04 PM Apr 08, 2022 | Team Udayavani |

ಬೆಂಗಳೂರು: “ಸ್ವಾಮಿ, ನಾನು ಕೋಪದ ಕೈಗೆ ಬುದ್ಧಿ ಕೊಟ್ಟು ಜೀವನ ಹಾಳು ಮಾಡಿಕೊಂಡೆ. ನನ್ನ ಕೈಯಾರೆ ಮಗನನ್ನು ಕೊಂದುಬಿಟ್ಟೆ. ಕೊಲ್ಲುವ ಉದ್ದೇಶ ನನಗೆ ಇರಲಿಲ್ಲ. ಮಗನಿಗೆ ಬುದ್ಧಿ ಕಲಿಸಿ ಸರಿದಾರಿಗೆ ತರುವ ಅಸೆ ಇತ್ತು ಅಷ್ಟೇ’ ಇದು ಚಾಮರಾಜಪೇಟೆಯ ಆಜಾದ್‌ ನಗರದಲ್ಲಿ ಮಗನಿಗೆ ಬೆಂಕಿ ಹಚ್ಚಿ, ಆತನ ಸಾವಿಗೆ ಕಾರಣನಾಗಿ ಜೈಲಿಗೆ ಹೋದಾಗ ತಂದೆ ಸುರೇಂದ್ರ ಪೊಲೀಸರ ಮುಂದೆ ಕಣ್ಣೀರು ಹಾಕಿ ನೋವಿನಿಂದ ಹೇಳಿದ ಮಾತುಗಳಿವು.

Advertisement

ಹೆದರಿಸುವ ಉದ್ದೇಶವಿತ್ತು ಅಷ್ಟೆ
ನನ್ನ ಮಗ ಜೀವನದಲ್ಲಿ ಏನೂ ಸರಿಯಾದದ್ದನ್ನು ಮಾಡಲಿಲ್ಲ. ಸಿಎ ಓದು ಅರ್ಧಕ್ಕೆ ನಿಲ್ಲಿಸಿದ. ವ್ಯವಹಾರ ನೋಡಿಕೊಳ್ಳಲು ಹೇಳಿದ್ದೆ. ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಿಲ್ಲ. ಹಣಕಾಸು ಲೆಕ್ಕಾಚಾರದಲ್ಲೂ ತಪ್ಪು ಮಾಡುತ್ತಲೇ ಇದ್ದ. ಮಗ ಹಾಳಾಗಿ ಹೋಗುತ್ತಾನೆ ಎಂದು ನೋವು ತಿನ್ನುತ್ತಿದ್ದೆ. ನನ್ನ ಮಗನನ್ನು ಹೆದರಿಸಿ ಸರಿಪಡಿಸುವ ಉದ್ದೇಶದಿಂದ ಥಿನ್ನರ್‌ ಹಾಕಿದೆ. ನನ್ನ ಕೈಯಾರೆ ನನ್ನ ಮಗನನ್ನು ಕೊಂದು ಬಿಟ್ಟೆ. ಕೋಪಗೊಂಡು ಅವನ ಮೇಲೆ ಥಿನ್ನರ್‌ ಹಾಕಿದೆ. ಮೊದಲ ಸಲ ಬೆಂಕಿ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ. ಎರಡನೇ ಸಲ ಕಡ್ಡಿ ಅವನ ಮೇಲೆ ಬಿತ್ತು ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಪ್ಪನ ಮೇಲೆ ಆರೋಪಿಸದ ಪುತ್ರ
ಅಪ್ಪ ಬೆಂಕಿ ಹಚ್ಚಿದ ಪರಿಣಾಮ ತಾನು ಗಂಭೀರ ಸ್ಥಿತಿಯಲ್ಲಿದ್ದರೂ, ತನ್ನ ತಂದೆಯ ಮೇಲಿನ ಪ್ರೀತಿ ಅರ್ಪಿತ್‌ಗೆ ಕಡಿಮೆಯಾಗಿರಲಿಲ್ಲ. ನಾನು ಸತ್ತರೂ ಪರವಾಗಿಲ್ಲ ನನ್ನ ತಂದೆಗೆ ಏನೂ ಆಗಬಾರದು ಎಂದೇ ಭಾವಿಸಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಕೇಳಿದಾಗ, ಆಕಸ್ಮಿಕವಾಗಿ ಬೆಂಕಿ ಅವಘಡ ಆಯಿತು. ನಾನೇ ಬೆಂಕಿ ಇಟ್ಟುಕೊಂಡೆ ಎಂದು ಹೇಳಿಕೆ ನೀಡಿದ್ದ. ಸಾವು-ಬದುಕಿನ ಹೋರಾಟದಲ್ಲೂ ಅಪ್ಪನಿಗೆ ಏನೂ ಆಗಬಾರದು ಎಂದು ಮಗ ಆಸೆ ಪಟ್ಟಿದ್ದ. ಆದರೆ ಅರ್ಪಿತ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಅತ್ತ ಕೃತ್ಯ ನಡೆದ ಸಮೀಪವಿದ್ದ ಸಿಸಿ ಕೆಮರಾ ದೃಶ್ಯಾವಳಿಗಳು ಅರ್ಪಿತ್‌ ತಂದೆಯ ಕೃತ್ಯಕ್ಕೆ ಸಾಕ್ಷಿಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next