ಬೆಂಗಳೂರು : ಮದ್ಯದ ಅಮಲಿನಲ್ಲಿ ಮಲಗಿದ್ದ ವೃದ್ಧನನ್ನು ಕೇವಲ 500 ರೂ.ಗೆ ಕೊಲೆಗೈದಿದ್ದ ಬಸ್ ಕ್ಲೀನರ್‌ನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಪ್ರಶಾಂತ್(27) ಬಂಧಿತ. ಈತ ಮಾ.15ರಂದು ತಡರಾತ್ರಿ 11.30ರ ಸುಮಾರಿಗೆ ಮದ್ಯದ ಅಮಲಿನಲ್ಲಿ ಪೀಣ್ಯ 2ನೇ ಹಂತದ ಬಸ್ ನಿಲ್ದಾಣದ ಸಮೀಪದಲ್ಲಿ ಮಲಗಿದ್ದ ವೃದ್ಧ ಹನುಮಂತರಾಯಪ್ಪ(64)ನನ್ನು ಕೊಲೆಗೈದು, ಅವರ ಜೇಬಿನಲ್ಲಿದ್ದ 500 ರೂ. ಕದ್ದು ಪರಾರಿಯಾಗಿದ್ದನು.
ಕುಣಿಗಲ್‌ನಲ್ಲಿ ಉಪ್ಪಿನಕಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಕಾರ್ಖಾನೆ ರಜಾ ದಿನಗಳಲ್ಲಿ ಬೆಂಗಳೂರು-ಕುಣಿಗಲ್ ಬಸ್‌ಗಳಲ್ಲಿ ಕ್ಲೀನರ್ ಆಗಿ ಹಾಗೂ ಸಮೀಪದ ಟ್ರೋಲ್ ಬಂಕ್‌ನ ವಾಹನಗಳಿಗೆ ಗಾಳಿ ತುಂಬುವ ಕೆಲಸ ಮಾಡುತ್ತಿದ್ದ. ಮಾ.13ರಂದು ಬೆಂಗಳೂರಿಗೆ ಬಂದಿದ್ದ ಪ್ರಶಾಂತ್, ಬೆಳಗ್ಗೆ ವೇಳೆ ಕೆಲಸ ಮಾಡಿ, ರಾತ್ರಿ ವೇಳೆ ಕಂಠಪೂರ್ತಿ ಮದ್ಯ ಸೇವಿಸಿ ನಂತರ ಬಸ್‌ನಲ್ಲಿ ಮಲಗುತ್ತಿದ್ದ.
ಇದನ್ನೂ ಓದಿ : ಕಾಣಿಯೂರಿನಲ್ಲಿ ಅಡಿಕೆ, ಸಿಲಿಂಡರ್ ಕಳವು : ನಿರಂತರವಾಗಿ ಕಳ್ಳತನ ನಡೆದರೂ ಪತ್ತೆಯಾಗದ ಕಳ್ಳರು
ಮಾ.15ರಂದು ಪೀಣ್ಯ ಬಸ್ ನಿಲ್ದಾಣದ ಸಮೀಪದ ಕಟ್ಟೆಯೊಂದರ ಮೇಲೆ ಮದ್ಯ ಸೇವಿಸಿ ಮಲಗಿದ್ದ. ಅದೇ ವೇಳೆ ಹನುಮಂತರಾಯಪ್ಪ ಕೂಡ ಕಂಠಪೂರ್ತಿ ಮದ್ಯ ಸೇವಿಸಿ ಜ್ಞಾನವಿಲ್ಲದೆ, ರಸ್ತೆ ಬದಿ ಬಿದ್ದಿದ್ದರು. ಮತ್ತೂಂದೆಡೆ ಸೊಳ್ಳೆ ಕಾಟಕ್ಕೆ ಪದೇ ಪದೆ ಎಚ್ಚರಗೊಳ್ಳುತ್ತಿದ್ದ ಪ್ರಶಾಂತ್, ಹನುಮಂತರಾಯಪ್ಪ ಬಿದ್ದಿರುವುದನ್ನು ಗಮನಿಸಿದ್ದಾನೆ. ಬಳಿಕ ಆತನ ಬಳಿ ಹೋಗಿ ಒಂದೆರಡು ಬಾರಿ ಎಚ್ಚರಗೊಳಿಸಲು ಮುಂದಾಗಿದ್ದಾನೆ. ಆದರೆ, ವೃದ್ಧ ಎಚ್ಚರಗೊಂಡಿಲ್ಲ. ಆಗ ಜೇಬಿಗೆ ಕೈ ಹಾಕಿದ್ದಾಗ, ಎಚ್ಚರಗೊಂಡ ವೃದ್ಧ ತಡೆದಿದ್ದು, ನಂತರ ಜ್ಞಾನವಿಲ್ಲದೆ ಮತ್ತೆ ಮಲಗಿದ್ದಾನೆ. ಬಳಿಕ ಅಲ್ಲೇ ಪಕ್ಕದಲ್ಲಿದ್ದ ಸಿಮೆಂಟ್ ಇಟ್ಟಿಗೆ ಕಲ್ಲುನ್ನು ವೃದ್ಧನ ಮೇಲೆ ಎತ್ತಿ ಹಾಕಿ ಕೊಲೆಗೈದು, ಜೇಬಿನಲ್ಲಿದ್ದ 500 ರೂ. ಕದ್ದು ಪರಾರಿಯಾಗಿದ್ದ. ನಂತರ ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್, ಬಿ.ಆರ್.ಜಗದೀಶ್, ಪಿಎಸ್‌ಐ ಹನುಮಂತ ಹಾದಿಮನಿ, ಬಸವಲಿಂಗಪ್ಪ, ರಾಘವೇಂದ್ರ ಉಪರಿ, ರೋಹಿಣಿ ರೆಡ್ಡಿ ನೇತೃತ್ವದ ತಂಡ ಘಟನಾ ಸ್ಥಳದ ಸುತ್ತ-ಮುತ್ತಲ 100 ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.