ಬೆಂಗಳೂರು: ಭಾಮೈದ ತಂದಿಟ್ಟಿದ್ದ ಕಳವು ಮಾಲುಗಳನ್ನು ವಾಪಸ್ ಕೊಡುವಂತೆ ದೂರುದಾರನ ನಿರಂತರ ಬೆದರಿಕೆಗೆ ಆತಂಕಗೊಂಡ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಕತ್ತುಕೊಯ್ದು ಮೃತಪಟ್ಟಿರುವ ಘಟನೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಮೃತಹಳ್ಳಿ ನಿವಾಸಿ ಮೋಹನ್ ಕುಮಾರ್ (45) ಮೃತ ವ್ಯಕ್ತಿ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಅಸಹಜ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
ಪೇಟಿಂಗ್ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್, ಪತ್ನಿ ಮತ್ತು ಮಕ್ಕಳ ಜತೆ ಜಕ್ಕೂರಿನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಕೆಲ ದಿನಗಳ ಹಿಂದೆ ಮೋಹನ್ ಕುಮಾರ್ ಭಾಮೈದ ನಿತಿನ್ ಎಂಬಾತ ವಿವಿಪುರ ನಿವಾಸಿ, ಉದ್ಯಮಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದು, ಅವುಗಳನ್ನು ಭಾವ ಮೋಹನ್ ಕುಮಾರ್ ಮನೆಯಲ್ಲಿ ಇರಿಸಿದ್ದ. ಈ ಸಂಬಂಧ ಉದ್ಯಮಿ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ನಿತಿನ್ ಬಂಧಿಸಿದ್ದರು. ಬಳಿಕ ಮೋಹನ್ ಕುಮಾರ್ ಮನೆಗೆ ತೆರಳಿ ಚಿನ್ನಾಭರಣ ಜಪ್ತಿ ಮಾಡಿದ್ದರು. ಈ ಮಧ್ಯೆ ಚಿನ್ನವನ್ನು ಕಳೆದುಕೊಂಡಿದ್ದ ವ್ಯಕ್ತಿ, ಮೋಹನ್ ಕುಮಾರ್ ಠಾಣೆಗೆ ಬಂದಾಗ ಗಲಾಟೆ ಮಾಡಿದ್ದು, ಇಷ್ಟು ಮಾತ್ರವಲ್ಲ ಇನ್ನಷ್ಟು ಚಿನ್ನಾಭರಣ ಇವೆ. ಅವುಗಳನ್ನು ವಾಪಸ್ ನೀಡಬೇಕು. ಇಲ್ಲವಾದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಜತೆಗೆ ಒಂದೆರಡು ಬಾರಿ ಫೋನ್ ಕರೆ ಕೂಡ ಮಾಡಿದ್ದರು ಎಂದು ಹೇಳಲಾಗಿದೆ. ಆತನ ನಿರಂತರ ಒತ್ತಡಕ್ಕೆ ಬೇಸತ್ತ ಮೋಹನ್ ಕುಮಾರ್ ಮನೆಯಿಂದ ಸ್ವಲ್ಪ ದೂರದ ಜಕ್ಕೂರಿನ ಎರಡು ಪಥ ರಸ್ತೆಯ ಸಮೀಪ ಖಾಲಿ ಪ್ರದೇಶದಲ್ಲಿ ಕತ್ತು ಕೊಯ್ದುಕೊಂಡು ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ. ಸುಜೀತ್, ಚಿನ್ನದ ವಿಚಾರಕ್ಕೆ ವ್ಯಕ್ತಿಯೊಬ್ಬರಿಂದ ಬೆದರಿಕೆ ಇದ್ದುದರಿಂದ ನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ದೂರು ನೀಡಿದ್ದಾರೆ.