ಬೆಂಗಳೂರು:ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ (ಜನವರಿ 05) ಬೆಂಗಳೂರು, ಚೆನ್ನೈ ಮತ್ತು ಮೈಸೂರು ನಡುವಿನ ನೂತನ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದರು.
ಇದನ್ನೂ ಓದಿ:ಹಲ್ದ್ವಾನಿ ತೆರವಿಗೆ ತಡೆ; 50,000 ಜನರನ್ನು ರಾತ್ರೋರಾತ್ರಿ ಕಳಹಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ
ಹೆದ್ದಾರಿ ಕಾಮಗಾರಿಯ ವೈಮಾನಿಕ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಿತಿನ್ ಗಡ್ಕರಿ ಜೊತೆ ಕರ್ನಾಟಕದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಸಂಸದ ಬಿಎನ್ ಬಚ್ಚೇಗೌಡ ಜತೆಗಿದ್ದರು.
ಬೆಂಗಳೂರು ಚೆನ್ನೈ ನಡುವಿನ 262 ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ಹೈವೇ ಎಂಟು ಪಥವನ್ನು ಹೊಂದಿದ್ದು, ಇದಕ್ಕೆ ಅಂದಾಜು 16,730 ಕೋಟಿ ರೂಪಾಯಿ ವೆಚ್ಚವಾಗಲಿದೆ. ಬೆಂಗಳೂರು-ಚೆನ್ನೈ ನಡುವಿನ ನೂತನ ಹೆದ್ದಾರಿ ನಿರ್ಮಾಣದಿಂದ ಸುಮಾರು 40 ಕಿಲೋ ಮೀಟರ್ ಅಂತರ ಕಡಿಮೆಯಾದಂತಾಗಲಿದೆ ಎಂದು ವರದಿ ತಿಳಿಸಿದೆ.
40 ಕಿಲೋ ಮೀಟರ್ ಅಂತರ ಕಡಿಮೆಯಾಗುವುದರಿಂದ ವಾಹನ ಸವಾರರಿಗೆ ಸಮಯ ಮತ್ತು ಇಂಧನದಲ್ಲಿ ಉಳಿತಾಯವಾಗಲಿದೆ. ನೂತನ ಎಕ್ಸ್ ಪ್ರೆಸ್ ವೇನಲ್ಲಿ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಬಹುದಾಗಿದ್ದು, ಬೆಂಗಳೂರು-ಚೆನ್ನೈ ನಡುವಿನ 300 ಕಿಲೋ ಮೀಟರ್ ದೂರವನ್ನು ಇನ್ಮುಂದೆ 262 ಕಿಲೋ ಮೀಟರ್ ಅಂತರದಲ್ಲಿ ಕ್ರಮಿಸಬಹುದಾಗಿದೆ.