ಬೆಂಗಳೂರು: ರಾಜ್ಯದಲ್ಲಿ ಮರಳಿನ ಸಮಸ್ಯೆ ನಿವಾರಣೆಗೆ ವಿದೇಶದಿಂದ ಮರಳು ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ರಾಜ್ಯ ಸರ್ಕಾರ ಈಗ ರಾಜ್ಯದ ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಲು ನಿರ್ಧರಿಸಿದೆ. ಈ ಕುರಿತು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವ ಕುರಿತು ಚರ್ಚಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಉಪ ಸಮಿತಿ ವರದಿ ಬಗ್ಗೆ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯವನ್ನೂ ಪಡೆಯಲಾಗಿತ್ತು. ಅವರ ಅಭಿಪ್ರಾಯದಂತೆ ಕರಾವಳಿ ಭಾಗದ ಮೂರು ಜಿಲ್ಲೆಗಳಿಗೆ ಅನ್ವಯ ಆಗುವಂತೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಕಾನೂನು ತಿದ್ದುಪಡಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.
ಈಗಾಗಲೇ ಸಿಆರ್‌ಝಡ್ ವಲಯದಲ್ಲಿ ಕೇಂದ್ರ ಸರ್ಕಾರದ ಕಾನೂನಿನನ್ವಯ 500 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ಇದೆ. ಅದರ ಹೊರತಾಗಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರಿಗೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆಯಲು ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುವುದು. ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 10 ವರ್ಷ ನಿವಾಸಿಯೆಂದು ತಹಸೀಲ್ದಾರ್ ಅವರಿಂದ ಪ್ರಮಾಣ ಪತ್ರ ಪಡೆಯಬೇಕು. ಅಲ್ಲದೇ ಐದು ವರ್ಷದಿಂದ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಿರುವ ಬಗ್ಗೆ ಸೂಕ್ತ ದಾಖಲೆ ನೀಡಬೇಕು ಎಂದು ಹೇಳಿದರು.
ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಯಾವುದೇ ಯಾಂತ್ರಿಕ ದೋಣಿಯನ್ನು ಬಳಸುವಂತಿಲ್ಲ ಹಾಗೂ ತಾವು ತೆಗೆದ ಮರಳನ್ನು ಸಂಗ್ರಹಿಸಿಡಲು ಸೂಕ್ತ ಪ್ರದೇಶ ಇರುವುದನ್ನು ಖಾತ್ರಿ ಪಡಿಸಿದ ನಂತರ ಅನುಮತಿ ನೀಡಲಾಗುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಉಸ್ತುವಾರಿ ನೋಡಿಕೊಳ್ಳುತ್ತದೆ ಎಂದು ಜಯಚಂದ್ರ ತಿಳಿಸಿದರು.
ಕರಾವಳಿಗೆ ಪ್ರತ್ಯೇಕ ಮರಳು ನೀತಿ
– ಸಾಂಪ್ರದಾಯಿಕ ಮರಳುಗಾರಿಕೆಗೆ ಉತ್ತೇಜನ.
– ಗ್ರಾ.ಪಂ ವ್ಯಾಪ್ತಿಯಲ್ಲಿ 10 ವರ್ಷ ವಾಸದ ಪ್ರಮಾಣ ಪತ್ರ
– 5 ವರ್ಷ ಮರಳುಗಾರಿಕೆಯ ದಾಖಲೆ ನೀಡಬೇಕು.