Advertisement
ಈಗಾಗಲೇ ರಾಜ್ಯದ ಕೆಲ ಭಾಗಗಳಲ್ಲಿ ರೈತರು ಪ್ರಾಯೋಗಿಕವಾಗಿ ನೂತನ ತಳಿಗಳನ್ನು ಬೆಳೆಸಿದ್ದು ಬರಗಾಲದಲ್ಲೂ ಅನ್ನದಾತರು ಬಂಪರ್ ಬೆಳೆ ಬೆಳೆಯಬಹುದು ಎಂಬುದು ಸಾಬೀತಾಗಿದೆ. ಹೀಗಾಗಿ, ತಳಿ ವಿಜ್ಞಾನಿಗಳ ಮೊಗದಲ್ಲಿ ಸಂತಸ ಇಮ್ಮಡಿಸಿದೆ.
Related Articles
Advertisement
ಒಣ ಬೇಸಾಯದಲ್ಲಿ ಉತ್ತಮ ಬೆಳೆ: “ಐಸಿಎಚ್-5′ ಮತ್ತು “ಐಸಿಎಚ್-66′ ಹೊಸ ಹರಳು ಬೀಜದ ತಳಿ ಒಣಬೇಸಾಯದಲ್ಲಿ ಬೆಳೆಯಬಹುದಾಗಿದೆ. ಒಣಬೇಸಾಯದಲ್ಲಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 10-12 ಕ್ವಿಂಟಲ್ ಮತ್ತು ನೀರಾವರಿ ಪ್ರದೇಶದಲ್ಲಿ 15-17 ಕ್ವಿಂಟಲ್ ಹರಳು ಬೀಜ ಬೆಳೆಯಬಹುದಾಗಿದೆ. 3 ತಿಂಗಳಲ್ಲಿ ಗೋನೆ ಕಟಾವಿಗೆ ಬರಲಿದೆ. ನಂತರ 25 ರಿಂದ 30 ದಿನಗಳಿಗೆ 2ನೇ ಕೊಯ್ಲು ಸಿಗಲಿದೆ. ಒಣ ಬೇಸಾಯ ಪದ್ಧತಿಯಲ್ಲಿ 3 ತಿಂಗಳ ಮತ್ತು ನೀರಾವರಿ ಪ್ರದೇಶದಲ್ಲಿ 10 ತಿಂಗಳು ನಿರಂತವಾಗಿ ಹರಳು ಬೆಳೆಯ ಬಹುದಾಗಿದೆ.
ಈಗಾಗಲೇ ಹರಳು ಬೀಜಕ್ಕೆ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಇದೆ. ಕ್ವಿಂಟಲ್‌ಗೆ 6,500 ಸಾವಿರ ರೂ.ಗೆ ಮಾರಾಟವಾಗುತ್ತದೆ. 1ಎಕರೆ ಪ್ರದೇಶದಲ್ಲಿ ಹರಳು ಬೀಜ ಬೆಳೆಯಲು 15 -20 ಸಾವಿರ ರೂ.ಖರ್ಚಾಗಬಹುದು. ಆದರೆ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 45 ರಿಂದ 50 ಸಾವಿರ ರೂ. ನಿವ್ವಳ ಲಾಭ ಗಳಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಇದೀಗ ರೈತರ ಹೊಸ ಬೀಜ ತಳಿಯತ್ತ ಮುಖ ಮಾಡಿದ್ದಾರೆಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.
ಯುದ್ಧ ವಿಮಾನಕ್ಕೂ ಹರಳೆಣ್ಣೆ ಬಳಕೆ:
ಹರಳೆಣ್ಣೆಯನ್ನು ಹಲವು ಕ್ಷೇತ್ರಗಳಿಗೆ ಬಳಕೆಯಾಗುತ್ತಿದೆ. ಯುದ್ಧ ವಿಮಾನ ಸೇರಿ ರಕ್ಷಣಾ ಕ್ಷೇತ್ರಗಳ ಯಂತ್ರಗಳಿಗೂ ಹರಳೆಣ್ಣೆ ಬಳಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ರೈಲಿನ ಎಂಜಿನ್ ಯಂತ್ರಗಳ ಘರ್ಷಣೆ ತಪ್ಪಿಸಲು, ಸೌಂದರ್ಯ ವರ್ಧಕಗಳ ತಯಾರಿಕೆಗೂ ಹರಳೆಣ್ಣೆಯನ್ನು ಹೇರಳವಾಗಿ ಬಳಸಲಾಗುತ್ತಿದೆ. ಆಯುರ್ವೇದ ಕ್ಷೇತ್ರದಲ್ಲಿ ಹಾಗೂ ಗ್ರೀಸ್ ಸೇರಿ ಇನ್ನಿತರ ಉತ್ಪನ್ನಗಳ ತಯಾರಿಕೆಯಲ್ಲೂ ಹರಳೆಣ್ಣೆಯನ್ನು ಯಥೇತ್ಛವಾಗಿ ಬಳಸಲಾಗುತ್ತಿದೆ. ಸುಮಾರು 700ಕ್ಕೂ ಅಧಿಕ ಉಪಯೋಗಗಳು ಹರಳೆಣ್ಣೆಯಲ್ಲಿವೆ ಎಂದು ಕೃಷಿ ವಿವಿಯ ತಳಿ ವಿಜ್ಞಾನಿಗಳು ಹೇಳುತ್ತಾರೆ. ಹರಳೆಣ್ಣೆಯ ಹಿಂಡಿಯನ್ನು ಕೂಡ ಮಾಡಲಾಗುತ್ತದೆ. ಸಾವಯವ ಗೊಬ್ಬರ ರೂಪದಲ್ಲಿ ಇದನ್ನು ತೋಟಗಾರಿಕಾ ಬೆಳೆಗಳಿಗೆ ಬಳಕೆ ಮಾಡಲಾಗುತ್ತದೆ. ಸೌಂದರ್ಯ ವರ್ಧಕ ವಸ್ತುಗಳಿಗೂ ಹೇರಳವಾಗಿ ಬಳಸಲಾಗುತ್ತಿದೆ. ಗಾಡಿಗಳ ಕೀಲೆಣ್ಣೆಯನ್ನಾಗಿ ಕೂಡ ರೈತರು ಬಳಕೆ ಮಾಡುತ್ತಾರೆ. ಹೀಗಾಗಿ ಹರಳೆಣ್ಣೆಯಲ್ಲಿ ಬಹುಉಪಯೋಗಗಳಿವೆ ಎಂದು ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಕೃಷಿ ವಿವಿಯ ಹಿರಿಯ ತಳಿ ವಿಜ್ಞಾನಿ ಡಾ.ಯಮನೂರ ಅವರನ್ನು 9844371335 ಸಂಪರ್ಕಿಸಬಹುದು.
ಭಾರತ ಎಣ್ಣೆಕಾಳು ಬೀಜಗಳ ಅನುಸಂಧಾನ ಪರಿಷತ್ತು ಅಭಿವೃದ್ಧಿ ಪಡಿಸಿರುವ “ಐಸಿಎಚ್-5′ ಮತ್ತು “ಐಸಿಎಚ್-66′ ಎಂಬ ಹರಳು ಬೀಜದ ಹೊಸ ತಳಿಯನ್ನು ಜಿಕೆವಿಕೆ ಮೂಲಕ ರಾಜ್ಯದ ರೈತರಿಗೂ ಪರಿಚಯಿಸಲಾಗಿದೆ. ಒಣ ಪ್ರದೇಶದಲ್ಲಿ ರೈತರು ಬಂಪರ್ ಬೆಳೆ ಬೆಳೆದಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ 20 ಕ್ವಿಂಟಲ್ ಹೊಸತಳಿ ಬೀಜಗಳನ್ನು ಗದಗ ಸೇರಿ ಹಲವು ಜಿಲ್ಲೆಗಳ ರೈತರು ಖರೀದಿಸಿದ್ದಾರೆ.-ಡಾ.ಯಮನೂರ, ಬೆಂಗಳೂರು ಕೃಷಿ ವಿವಿಯ ಹಿರಿಯ ತಳಿ ವಿಜ್ಞಾನಿ
–ದೇವೇಶ ಸೂರಗುಪ್ಪ