ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ ಸಂದರ್ಭ ಹಲವೆಡೆ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವ್ಯಾಪಕ ಹಿಂಸಾಚಾರದ ಆತಂಕದ ನಡುವೆ ಬಿಗಿ ಭದ್ರತೆಯಲ್ಲಿ ಪಂಚಾಯತ್ ಚುನಾವಣೆಯ ಮತದಾನ ಪ್ರಾರಂಭವಾಗಿದೆ. ಹಲವೆಡೆ ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ.
ಟಿಎಂಸಿಯ ನಾಲ್ವರು ಕಾರ್ಯಕರ್ತರು ಮೃತಪಟ್ಟರೆ, ಕೂಚ್ ಬೆಹಾರ್‌ನಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಘರ್ಷಣೆಯಲ್ಲಿ ಗಾಯಗೊಂಡಿದ್ದ ಸಿಪಿಐಎಂ ಕಾರ್ಯಕರ್ತರೊಬ್ಬರು ಇಂದು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬೆಳಿಗ್ಗೆ 11 ಗಂಟೆಗೆ 22.6% ಮತದಾನವಾಗಿದ್ದರೆ, 9 ಗಂಟೆಗೆ 10.2% ಮತದಾನ ಆಗಿತ್ತು.
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ತೀವ್ರ ಹೋರಾಟಕ್ಕೆ ಸಾಕ್ಷಿಯಾಗಿದೆ.