Advertisement

ಬೇಂದ್ರೆ-ಮಧುರಚೆನ್ನರದ್ದು ಮೈತ್ರಿಯೋಗ: ಡಾ|ಇಟ್ಟಣ್ಣವರ

12:13 PM Aug 02, 2017 | Team Udayavani |

ಧಾರವಾಡ: ವರಕವಿ ಬೇಂದ್ರೆ ಮತ್ತು ಮಧುರಚೆನ್ನ ಇಬ್ಬರೂ ಕವಿಗಳು, ಸಂಶೋಧಕರು, ನೋವುಂಡವರು, ಆಧ್ಯಾತ್ಮವಾದಿಗಳಾಗಿದ್ದವರು ಎಂದು ಸಾಹಿತಿ ಡಾ| ಶ್ರೀರಾಮ ಇಟ್ಟಣ್ಣವರ ಹೇಳಿದರು. ಇಲ್ಲಿಯ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಮಧುರಚೆನ್ನರ ಜನ್ಮದಿನದ ಪ್ರಯುಕ್ತ ಆಡುಂಬೊಲ ಸಾಹಿತ್ಯ ಸಂವಾದ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಬೇಂದ್ರೆ-ಮಧುರಚೆನ್ನರ ಸಖ್ಯ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

Advertisement

ಬದುಕನ್ನ ಮತ್ತು ಬದುಕಿನಾಚೆಯ ವಿಶಾಲ ವಿಶ್ವವನ್ನರಸುತ್ತಿದ್ದ ಈ ಇಬ್ಬರೂ ಮೊದಲ ಭೆಟ್ಟಿಯಲ್ಲಿಯೇ ಅದಾವುದೋ ವಿಶಿಷ್ಟ ಆಕರ್ಷಣೆಗೊಳಗಾದರು. ಗೆಳೆತನವೆಂಬುದೇ ಒಂದು ಯೋಗವಾಗಿದ್ದು, ಅಪರೂಪದ ಒಂದು ಮೈತ್ರಿಯೋಗ ಅವರಲ್ಲಿ ಬೆಸೆದುಕೊಂಡಿತ್ತು. ಇಂಥದೊಂದು ನೆಲೆಯಲ್ಲಿ ಓದುವುದು, ಚರ್ಚಿಸುವುದು, ಸಾಧ್ಯವಾದರೆ ಬರೆಯುವದೆಂಬ ಸೂತ್ರ ಹಲಸಂಗಿಯ ಗೆಳೆಯರ ಮತ್ತು ಸಾಧನಕೇರಿಯ ಗೆಳೆಯರ ಗುಂಪಿನ ಆದರ್ಶವಾಗಿತ್ತು ಎಂದರು.

ಶ್ರೀಮಂತ ಕಾವ್ಯ ರಾಶಿಯನ್ನೇ ಸೃಷ್ಟಿಸಿದ ಬೇಂದ್ರೆ ಪ್ರೀತಿಯ ಬಣ್ಣದೆಳೆಗಳ ಅದೆಷ್ಟೋ ಕವಿತೆಗಳನ್ನು ಮಧುರಚೆನ್ನರ ಮೇಲೆ ಚಿತ್ರಿಸಿದ್ದರೆ ಮಧುರಚೆನ್ನರ ಗೀತೆಗಳ್ಳೋ ಅವುಗಳನ್ನು ಹಾಡುತ್ತಲೇ ಹೋಗಬೇಕೆಂದೆನಿಸುವ ಹಾಗೂ ವಿಶ್ಲೇಷಣೆಗಳನ್ನೇ ಬೇಡದ ಅಮರಗೀತೆಗಳಾಗಿವೆ. ಜ್ಞಾನಪಥದ ಬೇಂದ್ರೆ ಮತ್ತು ಭಕ್ತಿ ಪಥದ ಮಧುರಚೆನ್ನರು ಸಾಹಿತ್ಯದಲ್ಲಿ ಕರ್ನಾಟಕದ ನವೋದಯ ಯುಗವನ್ನು ಸೃಷ್ಟಿಸಿದ ದೃಷ್ಟಾರರಾಗಿದ್ದರು ಎಂದರು.

ಡಾ| ಶಾಲಿನಿ ರಘುನಾಥ, ಸರೋಜಾ ಇಟ್ಟಣ್ಣವರ, ಪಂ| ಬಿ.ಎಸ್‌.ಮಠ, ಪೊ| ಎ.ಜಿ.ಸಬರದ, ಸುರೇಶ ವೆಂ. ಕುಲಕರ್ಣಿ, ಎಸ್‌.ಸಿ. ಪಾಟೀಲ, ಪಂ| ವಾದಿರಾಜ ನಿಂಬರಗಿ, ಡಾ| ದೀಪಕ ಆಲೂರ, ಡಾ| ವಿರುಪಾಕ್ಷ ಬಡಿಗೇರ, ಉಮೇಶ ಮುನವಳ್ಳಿ, ವಿ.ಜಿ. ತಿಗರಿ, ರವಿಶಂಕರ ಗಡಿಯಪ್ಪನವರ, ವಸಂತ ವಾಯಿ ಇದ್ದರು. ಸಹನಾ  ತಾಮಣಕರ ಅವರು, ಮಧುರಚೆನ್ನರ ಆಯ್ದ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ| ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ನರಸಿಂಹ ಪರಾಂಜಪೆ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next